Monday, 27 November 2017

ಊರ್ಮಿಳೆಯ ತಪಸ್ಸು!

ಊರ್ಮಿಳೆಯ ತಪಸ್ಸು..!

‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ಕಾಯಾವಾಚಾಮನಸಾ, ಶ್ರದ್ಧೆಯಿಂದಲೇ ನೆರವೇರಿಸ್ತೀನಿ’ ರಾಮ ಹಸನ್ಮುಖಿಯಾಗೇ ಹೇಳಿದ.

‘ಪಟ್ಟಾಭಿಷೇಕಕ್ಕೆ ನಿಗದಿಯಾದ ಮುಹೂರ್ತದಲ್ಲೇ, ವನವಾಸಕ್ಕೆ ಪ್ರಯಾಣ’ ಕೈಕೆ ಕಟುವಾಗಿ ಆಜ್ಞಾಪಿಸಿದಳು.

‘ಶುಭಲಗ್ನ, ಶುಭಪ್ರದ. ಬರ್ತೀನಿ ಚಿಕ್ಕಮ್ಮ’ ಅಷ್ಟು ಹೇಳಿ, ಪ್ರಜ್ಞೆ ತಪ್ಪಿ ಮಲಗಿದ್ದ ದಶರಥನ ಕಾಲುಮುಟ್ಟಿ ಆಚೆ ಬಂದ.

ಮಾತು ಮುಗಿಯುತ್ತಿದ್ದ ಹಾಗೇ, ಮಂಗಳವಾದ್ಯ ಮೊಳಗಿತು.

ಇಷ್ಟು ಹೇಳಿದ ರಾಮ, ಬಂದಷ್ಟೇ ಗಾಂಭೀರ್ಯದಿಂದ, ಕೋಪಗೃಹದಾಚೆ ನಡೆದು ಹೋದ. ಕೈಕೆಗೆ ರಾಮನ ಮಾತು ಸಿಡಿಲು ಹೊಡೆಸಿತ್ತು. ಅವಳು ರಾಮನ ಆ ನಿಸ್ಪೃಹತೆಯ ಛಡಿಯೇಟಿಗೆ ಮನದಲ್ಲೇ ಕುಸಿದು ಬಿದ್ದಿದ್ದಳು, ದಶರಥ ದೈಹಿಕವಾಗಿಯೂ ಕುಸಿದು ಕಣ‌್ಣೀರೇ ದೇಹವಾದಂತಿದ್ದ.

ರಾಮ ಆಚೆ ಬಂದಾಗ, ಅವನ ಕಣ್ಣಿಗೆ ಕೋಪೋದ್ರಿಕ್ತನಾಗಿದ್ದ ಲಕ್ಷ್ಮಣ ಕಂಡ.  ರಾಮನೊಟ್ಟಿಗೆ ಬರುವಾಗಲೂ, ಅಣ್ಣನಿಗೆ ಏನಾದರೂ ತೊಂದರೆಯಗಬಹುದಾ ಅನ್ನೋ ಅನುಮಾನ ಮೂಡಿತ್ತು. ಆದರೆ ಇಂಥದ್ದೊಂದು ಘನಘೋರ ಅನ್ಯಾವಾಗುತ್ತೆ ಅನ್ನೋ ಕಲ್ಪನೆಯೂ ಇರಲಿಲ್ಲ. ಲಕ್ಷ್ಮಣ, ಕಟಕಟ ಅಂತ ಹಲ್ಲುಮಸೆಯುತ್ತಿದ್ದ  ಸದ್ದು ಕೇಳಿಯೇ ಲಕ್ಷ್ಮಣನ ಅವೇಶ ಎಷ್ಟಿದೆ ಎಂಬುದು ರಾಮನಿಗೆ ಗೊತ್ತಾಯ್ತು. ಏನೂ ಮಾತಾಡದೆ, ಸಣ್ಣ ನಗೆ ನಕ್ಕು, ಹೆಗಲ ಮೇಲೆ ಕೈ ಹಾಕಿಕೊಂಡು, ಅಲ್ಲಿಂದ ಹೊರಬಂದ. ಲಕ್ಷ್ಮಣನ ಹೆಗಲ ಮೇಲಿದ್ದ ಕೈ ಕಂಪಿಸುತ್ತಿತ್ತು, ಲಕ್ಷ್ಮಣನ ಅವೇಶದ ರಭಸಕ್ಕೆ.
=-=-=-

‘ಓಂ ಭೂರ್ಭುಸ್ವಃ ತತ್ಸತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾತ್..’’

ಕೌಸಲ್ಯೆ ಶ್ರದ್ಧೆಯಿಂದ ಪಠಿಸುತ್ತಿದ್ದಳು, ಪಟ್ಟಪೀತಾಂಬರ ತೊಟ್ಟ ರಾಮ ಆಕೆಯ ಕೋಣೆಗೆ ಕಾಲಿಟ್ಟಾಗ. ರಾಮ ಬಂದದ್ದು ತಾಯ ಕರುಳಿಗೆ ತಿಳಿದಂತೆ ಕಾಣುತ್ತೆ, ಮೆಲ್ಲಗೆ ಕಣ್ಬಿಟ್ಟು ನೋಡಿದಳು, ತನ್ನ ಕುಲದೇವ ಸೂರ್ಯನಾರಾಯಣನೇ ದಿವ್ಯ ಪ್ರಭೆಯೊಂದಿಗೆ ಬಂದು ನಿಂತಂತೆ ಶೋಭಿಸುತ್ತಿದ್ದ, ತನ್ನ ಮಡಿಲಲ್ಲಿ ಆಡಿ ಬೆಳೆದ ರಾಮ. ತನ್ನೆರಡೂ ಕೈಗಳನ್ನೂ ಮೇಲತ್ತಿ, ‘ಶುಭಮಸ್ತು ರಾಮ..’ ಎಂದು ಇನ್ನೂ ಏನೋ ಹೇಳಲು ಮುಂದಾದಳು, ಅಷ್ಟರಲ್ಲಿ ರಾಮ ತನ್ನ ಮಾತಿಗಳನ್ನ ಆರಂಭಿಸಿದ.

‘ಅಮ್ಮಾ, ಅಪ್ಪಾಜಿ ಈಗ ಮುಖ್ಯವಾದ ಕೆಲಸವೊಂದನ್ನ ಒಪ್ಪಿಸಿದ್ದಾರೆ. ಅದನ್ನ ನಿರ್ವಹಿಸೋಕೆ ಏನಿಲ್ಲದಿದ್ದರೂ ನಿನ್ನ ಆಶಿರ್ವಾದವಂತೂ ಬೇಕೇ ಬೇಕು. ಅನುಗ್ರಹಿಸು.’ ಅಂತ ತುಟಿಯಂಚಲಿ ಮಧುನಗೆ ಸೂಸುತ್ತ ಹೇಳಿದ.

ರಾಮ, ರಾಜ್ಯಪಾಲನೆ ಬಗ್ಗೆ ಹೇಳುತ್ತಿದ್ದಾನೆಂದು ಭಾವಿಸಿದ ಕೌಸಲ್ಯೆ, ಸಂಭ್ರಮದಿಂದ ತಲೆಯಾಡಿಸಿದಳು, ಅದೇನು ಹೇಳು ಎಂಬಂತೆ. ರಾಮ ಹೇಳಲು ಶುರುವಿಟ್ಟ, ಕೌಸಲ್ಯೆ, ದೇವರ ಮುಂದಿದ್ದ ತಿಲಕವನ್ನ ಕೈಗೆತ್ತಿಕೊಂಡು ರಾಮನ ಹಣೆಗಿಡಲು ಮುಂದಾದಳು.

‘ಅಪ್ಪಾಜಿ, ಚಿಕ್ಕಮ್ಮ ಕೈಕೆಗೆ ಎರಡು ವರ ಕೊಟ್ಟಿದ್ದರಂತಲ್ಲಾ..?’, ಹೌದೆಂದು ಹೂಂಗುಟ್ಟಿದಳು ಕೌಸಲ್ಯೆ, ಹಣೆಗೆ ಕುಂಕುಮವಿಟ್ಟು, ಹುಬ್ಬುಗಂಟಿಕ್ಕಿ. ‘ಅದನ್ನ ಈಗ  ಕೇಳಿದರಂತೆ. ಅಪ್ಪಾಜಿಯೂ ನೀಡಲು ಮುಂದಾಗಿದ್ದಾರೆ, ಆದರೆ ಅವರ ಮಾತು ನಡೆಸೋ ಹೊಣೆ ಈಗ ನನ್ನ ಮೇಲಿದೆ. ಭರತನಿಗೆ ಪಟ್ಟಕಟ್ಟುತ್ತಾರಂತೆ…’ ಕೌಸಲ್ಯೆಯ ಕಣ್ಣಲ್ಲಿ ಹನಿಗೂಡಿತು. ‘ನಾನು ಜಟಾವಲ್ಕಧಾರಿಯಾಗಿ, ಹದಿನಾಲ್ಕುವರ್ಷ ವನವಾಸ ಅನುಭವಿಸಬೇಕಂತೆ..’ ಕೌಸಲ್ಯೆಯ ಕಣ್ಣು ಕೋಡಿಯೊಡೆದು ಧಾರಾಕಾರವಾಗಿ ಹರಿಯಲಾರಂಭಿಸಿತು. ದೇವಪೀಠದ ಮೆಟ್ಟಿಲಮೇಲೆ ಕುಸಿದು ಬಿದ್ದಳು.

ರಾಮನಿಗೆ ಗೊತ್ತಾಯ್ತು. ಇಲ್ಲೇ ಇದ್ದರೆ ಕೆಲಸ ಕೆಡುತ್ತೆ ಅಂತ. ಆಶಿರ್ವಾದ ಮಾಡಮ್ಮ ಅಂತ ಕಾಲಿಗೆ ಬಿದ್ದು, ಅಲ್ಲಿಂದ ಹೊ ಹೊರಟ. ಲಕ್ಷ್ಮಣನೂ ಅಷ್ಟು ಹೊತ್ತಿಗೆ ಕೌಸಲ್ಯೆಯ ಕೋಣೆ ಪ್ರವೇಶಿಸಿದ. ಕೌಸಲ್ಯೆ ಕೂಗಿದಳು. ‘ರಾಮ ನನ್ನನ್ನು ಒಂಟಿ ಮಾಡಿ ಹೋಗ್ಬೇಡಪ್ಪ. ನಿಮ್ಮಪ್ಪ ಸರಿ ಇಲ್ಲ. ಯೌವನದ ಹೆಣ್ಣಿಗೆ ಶರಣಾಗಿ, ಹೆತ್ತ ಮಗನನ್ನೇ ಕಾಡಿಗಟ್ತಾ ಇರೋ ಆ ಮನುಷ್ಯ, ಇನ್ನು ಹೆಂಡ್ತಿಗೆ ಅನ್ಯಾಯ ಮಾಡದೇ ಇರ್ತಾನಾ? ಆ ಸವತಿ ಸಾಮ್ರಾಜ್ಯಪಾಲನೆ ಮಾಡ್ತಿದ್ರೆ ನನಗೆ ಸುಖವಾದ್ರೂ ಇರುತ್ತಾ? ಹೋಗ್ಬೇಡ ನೀನು. ಹಾಗೂ ಹೋಗೋದಾದ್ರೆ ನನ್ನನ್ನೂ ಕರ್ಕೊಂಡು ಹೋಗು..’ ಆಕ್ರಂದಿಸಿದಳು.

‘ಅಮ್ಮಾ.. ಅಪ್ಪಾ ಇರುವಾಗ್ಲೇ ನೀನು ನನ್ನ ಜೊತೆ ಬರೋದು ಧರ್ಮವಲ್ಲ. ಅಲ್ಲದೆ ಭರತನೇನು ಕೆಟ್ಟವನಲ್ಲ. ನಿನ್ನನ್ನ ಹೆತ್ತಮ್ಮನಿಗಿಂತಲೂ ಹೆಚ್ಚಾಗಿ ನೋಡಿಕೊಳ್ತಾನೆ. ಅವನ ರಾಜ್ಯಪರಿಪಾನೆ ಬಗ್ಗೆ ತಲೆ ಕೆಡಿಸಿಕೊಳ್ಬೇಡ. ನನ್ನ ಧರ್ಮಕ್ಕೆ ಅಡ್ಡಿ ಬರಬೇಡ’ ಅಂತ ರಾಮ ಹೇಳುವಷ್ಟೂ ಹೊತ್ತು ಕೈಮುಗಿದೇ ಇದ್ದ. ಕೌಸಲ್ಯೆ ಪರಿಪರಿಯಾಗಿ ಕೇಳಿಕೊಂಡರೂ ರಾಮ ಕೇಳಲಿಲ್ಲ. ‘ಗಂಡ ಹೇಗಿದ್ದರೂ, ಎಲ್ಲಿದ್ದರೂ, ಒಂದು ವೇಳೆ ತಪ್ಪು ಮಾಡಿದರೂ ಅವನನ್ನು ಅನುಸರಿಸುವುದೇ ಪತ್ನಿ ಧರ್ಮ. ಜನ್ಮಕಾರಕನಾದ ತಂದೆ ಹೇಳಿದಂತೆ ನಡೆಯಬೇಕಾದ್ದು ಪುತ್ರಧರ್ಮ. ಈ ಎರಡೂ ಧರ್ಮಗಳನ್ನ ನಿನ್ನ ವಾತ್ಸಲ್ಯದ ಕತ್ತಿ ಎತ್ತಿ ಛಿದ್ರಿಸಬೇಡ. ಹರಸಮ್ಮ’ ಅಂದು ಅಲ್ಲಿಂದ ಹೊರಡುತ್ತಾನೆ, ಸೀತೆಯಿದ್ದ ಕೋಣೆಯೆಡೆಗೆ.
-=-=-=-=

ಹೋಗುವಾಗ ಲಕ್ಷ್ಮಣ ಆಕ್ರೋಶಭರಿತನಾಗಿ, ಕ್ರೋಧೋನ್ಮತ್ತನಾಗಿ ಹೇಳ್ತಾನೆ, ‘ಅಣ್ಣ, ನೀನು ಹೂ ಅನ್ನು, ಈಗಲೇ, ಈ ಕ್ಷಣವೇ ಆ ಮುದಿರಾಜನ ಕಥೆ ಮುಗಿಸಿಬಿಡ್ತೀನಿ. ಅವನ ಇಡೀ ಸೇನೆಯನ್ನೇ ಧ್ವಂಸಮಾಡಿ ನಿನಗೆ ಪಟ್ಟಕಟ್ತೀನಿ. ಆ ಚಪಲಚಿತ್ತ ಇಂಥಾ ಸಾಕೇತಪುರಿಗೆ ಅರಸನಾಗಿರ್ಬೇಕಾ? ಛೇ. ಅವನು ಅಪ್ಪನೇ ಅಲ್ಲ. ಧರ್ಮ ಧರ್ಮ ಅಂತೀಯಲ್ಲ, ಹಿರಿಮಗನಿಗೆ ಪಟ್ಟಕಟ್ಟೋದೇ ತಾನೇ ಧರ್ಮ? ಆ ಧರ್ಮ ನೆರವೇರಿಸೋಕೆ ನನಗೆ ಅವಕಾಶ ಕೊಡು. ಮಗನನ್ನು ಕಾಡಿಗಟ್ಟೋ ತಂದೆ ತಂದೆನೇ ಅಲ್ಲ. ಏನಂತಿಯಾ? ನಾನಿರ್ತೀನಿ. ನೀನು ರಾಜನಾಗು..’

ಲಕ್ಷ್ಮಣನ ಮಾತು ಮುಗಿಯೋ ಹೊತ್ತಿಗೆ, ಸೀತೆಯ ಅಂತಃಪುರದ ಹೊಸಿಲು ಬಳಿಗಿಬ್ಬರೂ ಬಂದಿದ್ದರು. ಕೋಪದಿಂದ ಕೆಂಪಾಗಿದ್ದ ಲಕ್ಷ್ಮಣನ ಗಲ್ಲ ಹಿಡಿದ ರಾಮ, ‘ಪಟ್ಟ ಕಟ್ತೀನಿ ಅಂದಾಗ ತಂದೆಯಾದವನು, ಕಾಡಿಗೆ ಹೋಗು ಅಂದಾಗ ತಂದೆಯಾಗದೇ ಇರ್ತಾನಾ? ಕಾಡಿಗೆ ಕಳಿಸ್ತಿರೋದು ಕೈಕೆಯೂ ಅಲ್ಲ, ರಾಜ ದಶರಥನೂ ಅಲ್ಲ. ವಿಧಿ.  ನೀನು ಹೋರಾಟ ಮಾಡಬೇಕಿರೋದು ವಿಧಿಯ ವಿರುದ್ಧ. ಅದು ಸಾಧ್ಯಾನಾ ಸೋದರ? ಸಾಧು... ಸಾಧು... ಈ ನಿನ್ನ ಕೋಪ ಸರಿಯಾದ್ದಲ್ಲ. ಕೋಪದಲ್ಲಿ ಯಾವ ಮಾತನ್ನೂ ಆಡಬಾರದು ಅಂತ ಹೇಳಿಲ್ವಾ ನಿಂಗೆ? ಹೋಗಿಬರ್ತೀನಿ’ ಅಂದು ಅಲ್ಲಿಂದ ಒಳನಡೆದ.
-=-=-=-=

ಸೀತೆ, ಸರ್ವಾಲಂಕಾರಭೂಷಿತಳಾಗಿ, ಸಾಕ್ಷಾತ್ ಶ್ರೀಲಕ್ಷ್ಮಿಯಂತೆಯೇ ಕಂಗೊಳಿಸುತ್ತಿದ್ದಳು. ಕನ್ನಡಿ ಮುಂದೆ ನಿಂತು, ಕಾಡಿಗೆ ತೀಡುತ್ತಿದ್ದವಳಿಗೆ, ರಾಮನ ಆಗಮನ ಕಂಡಿತು. ಜಯಘೋಷವಿಲ್ಲದೆ, ಹರ್ಷಚಿತ್ತವಿಲ್ಲದೆ, ಭಾರವಾಗಿ ಹೆಜ್ಜೆ ಇಡುತ್ತಾ ಒಳಬಂದ ರಾಮನನ್ನ ನೋಡಿ ಸೀತೆ ಗಾಬರಿಯಾದಳು. ‘ರೀ.. ಏನಿದು? ಯಾಕೆ ಹೀಗಿದ್ದೀರೀ? ಮಾವ ಕರೆದರು ಅಂತ ಹೋದ್ರಲ್ಲ, ಏನಂದರು?’ ಎಂದು ಅನುನಯದಿಂದ ಕೇಳಿದಳು. ರಾಮ ನಡೆದ್ದೆಲ್ಲವನ್ನೂ ಹೇಳಿದ. ಸೀತೆ ಕಂಗಾಲಾದಳು. ರಾಮ ರೇಷಿಮೆಯ ಶಾಲನ್ನು ತೆಗೆದು, ಮಂಚದ  ಮೇಲೆ ಎಸೆವಷ್ಟರಲ್ಲಿ, ಸೀತೆಯೂ ತನ್ನ ಕಂಠಾಭರಣಗಳನ್ನೊಂದೊಂದೇ ತೆಗೆದು ಕನ್ನಡಿ ಮುಂದಿನ ಮೇಜಿನ ಮೇಲೆ ಇಡತೊಡಗಿದಳು.

ರಾಮನಿಗೆ ಅಚ್ಚರಿಯಾಯ್ತು. ಏನೋ ಕಾದಿದೆ ಅನ್ನಿಸಿತು. ಕೇಳಿದ, ಯಾಕೆ ಹೀಗೆ ಮಾಡ್ತಿದ್ದೀ ಅಂತ. ಆಗ ಸೀತೆ,
‘ಅಯ್ಯೋ ಭಗವಂತ, ಕಾಡಲ್ಲಿ ಈ ಆಭರಣಗಳನ್ನಿಟ್ಕೊಂಡು ನಾನೇನು ತಾನೇ ಮಾಡೇನು? ಅದೂ ಅಲ್ಲದೆ, ನಾವು ಹೋಗ್ತಿರೋದು ಋಷಿ ಜೀವನ ನಡೆಸೋಕೆ. ಇದೆಲ್ಲಾ ಅಲ್ಯಾಕೆ ಬೇಕು ಹೇಳಿ’ ಅಂದಳು. ರಾಮ ನಿಜಕ್ಕೂ ನಡುಗಿದ. ಸೀತೆ ಅದಾಗಲೇ ವನವಾಸಕ್ಕೆ ಸಂಪೂರ್ಣ ಸಿದ್ಧಳಿರುವುದು ರಾಮನಿಗೆ ಗೊತ್ತಾಯಿತು.

‘ಅಯ್ಯೋ.. ಹೇ ಮಿಥಿಲಾಧಿಪತಿ ಮಗಳೇ, ನೀನು ರಾಣಿ, ಮಹಾರಾಣಿ, ಜನಕನ ಆಸ್ಥಾನದಲ್ಲಿ ಮೆರೆದವಳು. ಅಯೋಧ್ಯಾಪುರಿಗೆ ಅಧಿನಾಯಕಿ ನೀನು. ಹುಲ್ಲಿನ ಮೇಲೂ ಬರೀಗಾಲಲ್ಲಿ ನಡೆದವಳಲ್ಲ. ಬೇಡ, ಬರಬೇಡ. ಅರಣ್ಯವಾಸ ನಿನ್ನಂಥಾ ಕೋಮಲೆಗಲ್ಲ. ನೀನಿಲ್ಲೇ ಇರು. ಅಮ್ಮನ ಆರೈಕೆ ಮಾಡು. ಅಪ್ಪಾಜಿಗೆ ಶುಶ್ರುಷೆ ಮಾಡು. ಅವರಿಗೂ ವಯಸ್ಸಾಗಿದೆ. ಬಿಟ್ಟು ಹೋಗೋದು ಒಳ್ಳೇದಲ್ಲ…’ ರಾಮ ಹೆಚ್ಚೂಕಮ್ಮಿ ಬೇಡಿಕೊಳ್ಳುವವನಂತೆಯೇ ಹೇಳಿದ.

ಸೀತೆ, ಜಪ್ಪಯ್ಯಾ ಅಂದ್ರೂ ಇರೋದಿಲ್ಲ ಅಂತ ಕಟ್ಟುನಿಟ್ಟಾಗಿ ಹೇಳೇ ಬಿಟ್ಟಳು. ರಾಮನಿನ್ನೂ ಸೀತೆಯನ್ನು ಮನವೊಲಿಸುತ್ತಲೇ ಇದ್ದ, ಅಷ್ಟರಲ್ಲೇ ಸ್ವರ್ಣಾಭರಣವನ್ನೆಲ್ಲಾ ಕಳಚಿಟ್ಟು, ಅರಣ್ಯವಾಸಕ್ಕೆ ಯೋಗ್ಯವಾದ ಬಟ್ಟೆಗಳನ್ನ ಕಪಾಟಿನಿಂದ ಹೊರತೆಗೆಯುತ್ತಿದ್ದಳು. ರಾಮನ ಕಣ್ಣೂ ತುಂಬಿಬಂದಿತ್ತು, ಸೀತೆಯ ಹಠಕ್ಕೆ. ಆಗ ಸೀತೆ, ರಾಮನ ಹೆಗಲಿಗೆ ತಲೆಯಾನಿಸಿ ಹೇಳಿದಳು, ‘ಸ್ವಾಮಿ, ನನ್ನನ್ನ ಕರೆಯೋದೇ ನಿಮ್ಮ ಅರ್ಧಾಂಗಿ ಅಂತಲ್ಲವೇ? ನಿಮ್ಮ ದೇಹದ ಅರ್ಧಭಾಗವನ್ನೇ ಬಿಟ್ಟು ಹೋಗೋದು ಎಷ್ಟು ಸರಿ? ಅದಿರ್ಲಿ, ನಿಮ್ಮ ಮಾವ, ನಿಮ್ಮ ಕೈಯಲ್ಲಿ ನನ್ನ ಕೈಯಿರಿಸಿ ನಿಮಗೂ ನನಗೂ ಏನು ಹೇಳಿದ್ದರು ನೆನಪಿದೆಯಾ? ಒಬ್ಬರಿಗೊಬ್ಬರು ನೆರಳಾಗಿರಬೇಕು, ಎಂಥದ್ದೇ ಸಂದರ್ಭದಲ್ಲೂ ಬೇರಾಗಬಾರದು ಅಂದಿದ್ದರೋ ಇಲ್ವೋ? ಈಗ ನನ್ನನ್ನ ಬಿಟ್ಟು ನೀವಿರ್ತೀರಾ? ನೀವಿರ್ತಿರೇನೋ, ಆದರೆ, ನನ್ನಿಂದ ಸಾಧ್ಯವಿಲ್ಲ. ಈ ಕೊಂಪೆಯಲ್ಲಿ ನನ್ನನ್ನು ಒಂಟಿಮಾಡಬೇಡಿ..’ ಎಂದು. ರಾಮನ ಎದೆಯೆಲ್ಲಾ ಜಾನಕಿಯ ಕಂಬನಿಯಿಂದ ತೋಯ್ದಿತ್ತು. ರಾಮ ಇನ್ನೂ ಮಾತಾಡಲಿಲ್ಲ. ‘ರೀ.. ನೀವಿದ್ದರೆ ಅರಣ್ಯವೂ ನನಗೆ ಅರಮನೆಯೇ, ನೀವಿಲ್ಲದಿದ್ದರೆ ಅರಮನೆಯೂ ಅರಣ್ಯವೇ. ದಮ್ಮಯ್ಯ.. ಒಂಟಿ ಮಾಡಿ ಹೋಗ್ಬೇಡಿ..’ ಬಿಕ್ಕಳಿಸಿ ಅತ್ತಳು ಸೀತೆ. ರಾಮ ಸೋತ. ಸೀತೆಗೂ ಕಾಡಿಗೆ ಬರಲು ಸಮ್ಮತಿಸಿದ.
ಇಬ್ಬರೂ ಕೋಣೆಯಿಂದೀಚಿ ಬರುವಷ್ಟರಲ್ಲಿ, ’ಅಣ್ಣ, ನೀನು ಕೊಟ್ಟಿದ್ದ ಮಾತು ಮರೆತ್ಯಾ? ನೀನೆಲ್ಲೇ ಇದ್ದರೂ ನನ್ನನ್ನ ಬಿಟ್ಟು ಹೋಗೊದಿಲ್ಲಾಂತ ಮಾತು ಕೊಟ್ಟಿದ್ದೆ. ನಿನ್ನ ಮಾತನ್ನ ಉಳಿಸಿಕೋ ಮೊದಲು, ಆಮೇಲೆ ಬೇಕಿದ್ರೆ ಆ ಮುದುಕನ ಮಾತು ಕೇಳುವೆಯಂತೆ. ನಾನೂ ಹೊರಡ್ತೀನಿ. ನಿನ್ನ ಜೊತೆ ಅರಣ್ಯವಾಸಕ್ಕೆ ನಾನೂ ಬರ್ತಿದ್ದೀನಿ. ಇನ್ನೊಂದು ಮಾತಾಡಿದ್ರೂ ಸರಿಯಿರಲ್ಲ.’ ರಾಮನ ಯಾವ ಮಾತಿಗೂ, ಪ್ರತಿಕ್ರಿಯೆಗೂ ಲಕ್ಷ್ಮಣ ಕಾಯಲೇ ಇಲ್ಲ. ಥೇಟ್ ಆದಿಶೇಷನ ಹಾಗೆ ಬುಸುಗುಡುತ್ತಾ ಹೊರಟೇ ಬಿಟ್ಟ.
=--=-=

ಅಕ್ಕ ಭಾವನ ಖುಷಿಯನ್ನ ನೆನಪಿಸಿಕೊಂಡೇ ಊರ್ಮಿಳೆ, ಲಕ್ಷ್ಮಣನ ಹೆಂಡತಿ ಉಬ್ಬಿ ಹೋಗಿದ್ದಳು. ಸಾಲಂಕೃತಳಾಗಿ ಶುಭಮುಹೂರ್ತಕ್ಕಾಗಿ ಕಾಯುತ್ತಿದ್ದಳು. ಧಡಾರ್ ಅಂತ ಆಕೆಯ ಅಂತಃಪುರದ ಬಾಗಿಲು ಸದ್ದು ಮಾಡಿತು. ಮಂಚಕೊರಗಿ ಮಲಗಿದ್ದ ಊರ್ಮಿಳೆ ಧಿಗ್ಗನೆದ್ದು ಬಾಗಿಲ ಕಡೆ ನೋಡಿದಳು. ಮದ್ದಾನೆ ದಾಳಿಯಿಡುವಷ್ಟು ರಭಸವಾಗಿ ಹೆಜ್ಜೆ ಇಡುತ್ತಾ ಬಂದ ಲಕ್ಷ್ಮಣ. ಊರ್ಮಿಳೆಗೆ ಒಳಗೊಳಗೇ ಭಯ, ಮೊದಲೇ ಕೋಪಿಷ್ಟ, ಯಾರಜೊತೆ ಏನು ಕಿತ್ತಾಡಿದನೋ ಎಂದು ಚಡಪಡಿಸಿದಳು. ಏನಾಯಿತೆಂದು ಕೇಳುವಷ್ಟರಲ್ಲಿ, ’ಊರ್ಮಿ, ನಾನಿರಲ್ಲ, ಇನ್ನು ಹದಿನಾಲ್ಕು ವರ್ಷ, ಅಣ್ಣನಿಗೆ ವನವಾಸ ಪ್ರಾಪ್ತಿಯಾಯ್ತು. ಆ ದುಷ್ಟೆ, ದುರುಳೆ, ಆ ಮಹಾಮೋಸಗಾತಿ ಕೈಕೆ, ರಾಮನ ಪಟ್ಟವನ್ನೂ ಕಿತ್ಕೊಂಡಳು, ಅವನ ಅದೃಷ್ಟವನ್ನೇ ಲಪಟಾಯಿಸದಳು. ಛೀ. ಇನ್ನವಳ ಮಗ ರಾಜ್ಯಭಾರ ಮಾಡ್ತಾನೆ. ನಾನು, ಅಣ್ಣ, ಅತ್ತಿಗೆ ಮೂವರು ವನವಾಸಕ್ಕೆ ಹೋಗ್ತಿದ್ದೀವಿ.’ ಎಂದು ಹೇಳಿ, ಕಿರೀಟ, ವಜ್ರಕವಚ, ಎಲ್ಲವನ್ನೂ ಒಂದು ಮಾತಿಗೊಂದರಂತೆ ಕಿತ್ತೆಸೆಯುತ್ತಾ, ಬಂದಷ್ಟೇ ವೇಗವಾಗಿ ಹೋಗಿಬಿಟ್ಟ.

ಊರ್ಮಿಳೆ ನಿಂತಲ್ಲೇ ಕಲ್ಲಾದಳು. ಕೈಕಾಕಲೇ ಆಡಲಿಲ್ಲ. ಅವಳಿಗೆ ಏನಾಗುತ್ತಿತೆ ಎಂಬುದೇ ಅರ್ಥವಾಗಲಿಲ್ಲ. ಒಂದು ಘಳಿಗೆ ಗರಬಡಿದವಳಂತೆ ನಿಂತಿದ್ದವಳು, ಓಟಕಿತ್ತಳು, ಸುಮಿತ್ರೆಯ ಅಂತಃಪುರ ಹೊಕ್ಕಳು. ಅಲ್ಲಿ ಸುಮಿತ್ರೆ ಇರಲಿಲ್ಲ. ಬಡಬಡ ಅಂತ ಕೈಕೆಯ ಮಂದಿರಕ್ಕೆ ಹೋದಳು, ಅಲ್ಲಿದ್ದಳು ಸುಮಿತ್ರೆ, ಮೂರ್ಛೆ ಬಿದ್ದಿದ್ದ ಕೈಸಲ್ಯೆಯ ತಲೆಸವರುತ್ತಾ…
=-=-

ಊರ್ಮಿಳೆಗೆ ಏನಾಗಿದೆ, ಏನಾಗುತ್ತಿದೆ, ಎಲ್ಲವೂ ಸ್ಪಷ್ಟವಾಯ್ತು. ವನವಾಸ ಬಂದಿದ್ದು, ರಾಮನಿಗಲ್ಲ, ತನಗೆ ಎಂದು ಈಗಂದುಕೊಂಡಳು ಊರ್ಮಿಳೆ. ತಾನೂ ಲಕ್ಷ್ಮಣನ ಜೊತೆ ಹೋಗಲೇ ಎಂದುಕೊಂಡಳು, ಅಷ್ಟರಲ್ಲಿ ಸುದ್ದಿ ಬಂತು, ಸೀತಾರಾಮ ಲಕ್ಷ್ಮಣರು ಅಯೋಧ್ಯೆಯನ್ನು ಬಿಟ್ಟಿದ್ದಾರೆ, ಧನಕನಕವನ್ನೆಲ್ಲಾ ಹಂಚಿ ಕಾಡಿನ ಕಡೆ ಹೋಗಿದ್ದಾರೆ ಅಂತ.
ಊರ್ಮಿಳೆ, ತನ್ನ ದೌರ್ಭಾಗ್ಯಕ್ಕೆ ತನ್ನನ್ನೇ ಶಪಿಸಿಕೊಂಡಳು.

‘‘ಅಯ್ಯೋ ದುರ್ವಿಧಿಯೇ, ಎಂಥಾ ಕೆಲಸ ಮಾಡಿಬಿಟ್ಟೆ. ತುಂಬಿದ ಮನೆಯನ್ನೇ ಹೊಡೆದು ಹಾಕಿದೆಯಲ್ಲಾ.. ಕೈಕೇ, ನೀನು ಕೇಳೀದ್ದು ವರವಲ್ಲ ಶಾಪ. ಇನ್ನು ಸಾಕೇತಪುರಿ ಸ್ಮಶಾಣ ನಗರಿ ಅಷ್ಟೆ. ಈ ಅರಮನೆಯ ತುಂಬಾ ಇನ್ಮುಂದೆ ಪಿಶಾಚಿಗಳೇ ಓಡಾಡುತ್ತವೆ ಹೊರತು, ಮನುಷ್ಯರಲ್ಲ. ರಾಮನ ಪಟ್ಟಾಭಿಷೇಕ, ಎಂಥಾ ಸುವಾರ್ತೆಯಿದು! ಈ ಮಾತನ್ನ ಭಾವನೋ, ದಶರಥನೋ, ಇಲ್ಲ ಕೌಸಲ್ಯೆಯೋ ನೇರವಾಗಿ ಕೈಕೆಯ ಕಿವಿಗೆ ಹಾಕಬಾರದಿತ್ತೆ! ಆ ಕುಬ್ಜೆ ಮಂಥರೆಯಲ್ಲದೆ ಮತ್ಯಾರೇ ಈ ಸುದ್ದಿ ಮುಟ್ಟಿಸಿದ್ದರು ನನಗೀ ಶಾಪ ತಟ್ಟುತ್ತಿರಲಿಲ್ಲ. ಪತಿದೇವ, ಅಣ್ಣನ ಮೇಲಿರುವಷ್ಟು ಪ್ರೀತಿಯಲ್ಲಿ ಕಿಂಚಿತ್ತಾದ್ರೂ ಕಾಳಜಿ, ಕಟ್ಕೊಂಡ ಹೆಂಡತಿ ಮೇಲೆ ನಿನಗಿಲ್ಲವೇ? ನನ್ನೂ ಒಂದು ಮಾತು ಕರೆದಿದ್ದರೆ, ಬರೀ ಕಣ್ಸನ್ನೆಯಲ್ಲಿ ಬಾ ಎಂದಿದ್ದರೂ, ನಿನ್ನ ಪಾದಧೂಳಂತೆ ಹಿಂದಿಂದೆ ಓಡಿಬರುತ್ತಿರಲಿಲ್ಲವೇ? ಅಕ್ಕಾ, ಸೀತಕ್ಕಾ, ನೀನೇ ಅದೃಷ್ಟವಂತೆ ಕಣೆ, ನಾನೂ ನಿನ್ನ ಹಾಗೆ ಅಪ್ಪನ ಹತ್ತಿರವೇ ಬೆಳಿಬೇಕಿತ್ತು. ಆಗ ನಿನ್ನಷ್ಟೇ ಮಾತುಗಾರ್ತಿಯಾಗ್ತಿದ್ದೆ. ಮಾತಲ್ಲೇ ಗಂಡನ ಮನಗೆದ್ದು ವನವಾಸಕ್ಕೆ ಹೋದೆಯಲ್ವಾ? ಹೋಗು ಹೋಗು, ಪತಿಪ್ರೇಮ ಪಡೆದ ಪುಣ್ಯವತಿ ನೀನು. ಅಲ್ವೇ ಅಕ್ಕಾ, ನಿನ್ನ ಮೈದುನ ಬರುವಾಗ, ಒಂದೇ ಒಂದು ಮಾತು ಹೇಳಬೇಕಿತ್ತು ತಾನೇ? ಅಯ್ಯಾ ಲಕ್ಷ್ಮಣ, ಊರ್ಮಿ ಏನಾದ್ರೂ ಬರ್ತಾಳ ಕೇಳೀ ನೋಡಯ್ಯಾ ಅಂತ… ಅವನಿಗೆ ಅಣ್ಣ ಬೇಕು. ನಿನಗೆ ಗಂಡ ಬೇಕು. ನಾನ್ಯಾರಿಗೆ ಬೇಕು ಹೇಳು..? ಎಲ್ಲರೂ ಮರೆತು ಕೂತ ಪಾತ್ರ ನಾನು… ಹದಿನಾಲ್ಕು ವರ್ಷ…ಅಬ್ಬಾ.. ಹದಿನಾಲ್ಕು ವರ್ಷ… ಹೇಗಿರಲಿ? ಪ್ರಾಣೇಶನ ತೊರೆದು ಹೇಗೆ ಜೀವಿಸಲಿ? ಇಲ್ಲೇ, ಇದೇ ಅಂತಃಪುರದಲ್ಲೇ ಶುದ್ಧ ತಪಸ್ವಿನಿಯಾಗಿರ್ತೀನಿ. ನನ್ನ ಗಂಡನ ತಪಸ್ಸು ಮಾಡ್ತಲೇ ಇರ್ತೀನಿ…ಮನೆಸೊಸೆ ಇದಕ್ಕಿಂತ ಹೆಚ್ಚೇನು ಮಾಡಬಲ್ಲಳು. ಓ ಪತಿದೇವ, ನಿನ್ನಮ್ಮಂದಿರ ಸೇವೆಯ ಭಾಗ್ಯ ಕೊಟ್ಟೆಯಲ್ಲಾ ಅಷ್ಟು ಸಾಕು, ಕೆಟ್ಟು ತವರು ಸೇರದಿದ್ದರೆ ಅದೇ ಸೌಭಾಗ್ಯ… ನಿನಗೆ ಜಯವಾಗಲಿ, ನಿನ್ನ ಪ್ರೀತಿಪಾತ್ರರೇ ಧನ್ಯರು. ನಿನ್ನ ಅಭಿಮಾನವಿದ್ದವರಿಗೆ ಕಷ್ಟವೆಂಬುದೇ ಇಲ್ಲ. ಆದರೆ ನಿನ್ನ ಪ್ರೇಮಿಸುವ ನನಗೇ ಅಷ್ಟಅನಿಷ್ಟಗಳು ಬಂತೇ! ಬರಲಿ… ಬರಲಿ ಬಿಡು… ಪ್ರೀತಿಸುವಾತ ನೋವನ್ನಲ್ಲದೆ ಮತ್ತೇನನ್ನು ತಾನೇ ಬಳುವಳಿಯಾಗಿ ನೀಡಬಲ್ಲ? ಆದರೆ ಅದರ ನೋವೇ  ಪ್ರೀತಿಯ ಸಂಕೇತವಾಗಿರುತ್ತದೆ… ಇಗೋ, ನಿನ್ನ ಹೆಂಡತಿ, ಜನಕಜೆ, ಊರ್ಮಿಳೆ, ನಿನ್ನ ಪ್ರೇಮಯಾಗದ ಸಮಿತ್ತಿನಂತಿಲ್ಲಿ, ಈ ಮಹಾರಣ್ಯಕ್ಕಿಂತಲೂ ಘೋರಕಾನನವಾದ ಈ ಅಯೋಧ್ಯೆಯ ಅರಮನೆಯಲ್ಲಿ ನಿತ್ಯದಹಿಸಿಕೊಳ್ಳುತ್ತಲೇ ಇರುತ್ತಾಳೆ.. ನೀನು ಕ್ಷೇಮವಾಗಿ ಬಂದ ದಿನ ನಿನ್ನ ಸೇವಾನಿರತಳಾಗುತ್ತಾಳೆ…’’
-ನಾದೀ

Friday, 12 May 2017

ಅಲ್ಲಿ ದೇವರಿರಲಿಲ್ಲ..!

ಅಲ್ಲಿ ದೇವರಿರಲಿಲ್ಲ..!

ಅದು ಆ ಊರಿನ ಕೊನೆಯ ಬೀದಿಯ ಕಡೆಯ ಮನೆ. ಅಲ್ಲಿಗೆ ಹೋದವನು ಪತಿತ. ಮರ್ಯಾದಸ್ಥರ ಪಾಲಿಗೆ, ಆ ಮನೆಯ ಕಡೆ ತಲೆ ಇಟ್ಟು ಮಲಗೋದು ಸಹ ನಿಶಿದ್ಧ. ಆ ಮನೆಯಲ್ಲಿದ್ದವಳು, ಬೆಳ್ಳಿ.

ಇಂಥಾ ಮನೆಯಿದ್ದ ಊರಿನಲ್ಲೇ ಶ್ರೀರಾಮನ ದೇವಾಲಯವಿತ್ತು. ಅಲ್ಲಿ ತಲೆಮಾರುಗಳಿಂದಲೂ ಐನೋರ ವಂಶಸ್ಥರೇ ಪೂಜೆ ಮಾಡಿಕೊಂಡು ಬಂದಿದ್ದರು. ರಾಮಯ್ಯನೋರು ಹೇಳೋ ಪ್ರಕಾರ, ಅವರಜ್ಜನ ಕಾಲದಲ್ಲಿ ಇಲ್ಲಿಗೆ ಸಪ್ತರ್ಷಿಗಳು ಬಂದು ರಾಮನ ಪೂಜೆ ಮಾಡ್ತಿದ್ರಂತೆ. ಅವರಜ್ಜನ ಕಾಲದಲ್ಲೂ ಈ ಮಾತು ಅಂತಕಂತೆಯಾಗಿಯೇ ಇತ್ತು! ಅವತ್ತು ಸಪ್ತರ್ಷಿಗಳು ಬಂದಿದ್ದರೋ, ಇಲ್ಲವೋ ಗೊತ್ತಿಲ್ಲ. ಆದರೆ ಈಗ, ಹಾಗಂದುಕೊಂಡು ಹತ್ತಾರು ಊರುಗಳಿಂದ ಭಕ್ತರು ಬರುತ್ತಿದ್ದರು.
   
ರಾಮಯ್ಯನೋರು ತುಂಬಾ ಸಭ್ಯಸ್ಥರು. ಊರಲ್ಲಿ ಯಾರ ಮನೆಯಯಲ್ಲಾದರು ಪುರುಡಾದರೆ, ರಾಮಯ್ಯನೋರ ಮಾರ್ಗದರ್ಶನದಲ್ಲೇ ಮನೆಮಂದಿ ನಡಿಬೇಕು. ಯಾರಾದರೂ ನೆಗದುಬಿದ್ದರೆ, ಅವರ ಪಿತೃಗಳಿಗೆ ಪಿಂಡ ಇಡೋದಕ್ಕೂ ರಾಮಯ್ಯನೋರೆ ಬೇಕು. ಕೆಲವು ಸಲ, ಮದುವೆ ಮಂಟಪದಲ್ಲಿ ಗಟ್ಟಿಮೇಳದ ಸದ್ದು ನಿಲ್ಲುತ್ತಿದ್ದ ಹಾಗೇ, ಸ್ಮಶಾನದಲ್ಲಿ ಕಾಯುತ್ತಿದ್ದ ಹೆಣಕ್ಕೆ ಮುಕ್ತಿ ಕಾಣಿಸಬೇಕಿತ್ತು.  ಒಟ್ಟಾರೆ ರಾಮಯ್ಯನೋರದ್ದು ಅವಿಶ್ರಾಂತ ಬದುಕು. ಇಂಥಾ ಕಾರ್ಯದೊತ್ತಡದ ಮಧ್ಯಯೇ ಸುರೇಶ, ಮಹೇಶ, ವಿಜಯ, ಗಿರೀಶ ಅನ್ನೋ ಮೂರು ಗಂಡು ಒಂದು ಹೆಣ್ಣಿಗೆ ಜನ್ಮ ನೀಡಿದ್ದರು. ತಲೆತುಂಬಾ ಹುಡುಕಿದರೂ ಕರಿಗೂದಲು ಕಾಣದ ರಾಮಯ್ಯನೋರಿಗೆ ಈಗ ವಯಸ್ಸು ಐವತ್ತೋ ಐವತ್ತೈದೋ ಅಷ್ಟೆ. ಇಷ್ಟು ವರ್ಷದಲ್ಲಿ ಸತ್ಯವನ್ನಲ್ಲದೆ ಮತ್ತೇನನ್ನೂ ಹೇಳಿರಲಿಲ್ಲವಂತೆ ರಾಮಯ್ಯನೋರು. ಈ ಮಾತನ್ನು ಖುದ್ದು ದೇವಾಲಯದ ಖಚಾಂಜಿಯೇ ಹೇಳಿದ್ದರು.
   
ಹೀಗೆ, ದಿನನಿತ್ಯದ ಪರಿಪಾಠದ ಹಾಗೆ, ಅವತ್ತೂ ಕೂಡ ಊರಿನ ಪ್ರಮುಖರೆಲ್ಲಾ ರಾಮಮಂದಿರದ ಜಗುಲಿಯಲ್ಲಿ ಕೂತು, ಆಗಷ್ಟೇ ಪ್ರಚಾರ ಪಡೀತಿದ್ದ ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಮಾತಾಡುತ್ತಿದ್ದರು.
“ಅಲ್ಲಪ, ಇನ್ಮುಂದೆ ಎಲ್ಡೇ ಮಕ್ಳು ಅಮ್ತಲ್ಲಪ ಎಲ್ಲಾರ್ಗುವೆ? ಜಾಸ್ತಿ ಆದ್ರೆ ಏನ್ ಮಾಡ್ತರೆ?”
“ಇನ್ಯಾತ್ ಮಾಡ್ತಾರೆ? ಅಮ್ಮಮ್ಮಾ ಅಂದ್ರೆ ಜುಲ್ಮಾನೆ ಆಕ್ಬೋದು ನೋಡು”
“ಅಲ್ಲ, ಇದ್ದುಕ್ಕಿದ್ದಂಗೆ ಇದುನ್ಯಾಕ್ ಮಾಡುದ್ರೋಪಾ? ಮನೆತುಂಬ ಮಕ್ಳಿರ್ಬೇಕು ತಾನೆ? ಏನ್ ಸರ್ಕಾರನ ಸಾಕ್ತೈತೆ?”
“ಅಂಗಲ್ವೋ, ನಾಕ್ನೇ ಹೆರ್ಗೆಗೆ ತವಿರಿಗೋದ್ಲಲ್ಲ, ಈರಿ ಎಂಡ್ತಿ ಗಂಗಮ್ಮ, ಸತ್ತಿದ್ಯಾಕೇಳು? ಮಗು ಹಡ್ಯಕ್ ಶಕ್ತಿನೇ ಇರ್ಲಿಲ್ವಂತೆ. ಇಂಗೆ ನಮ್ದೊಂದೂರಗೇ ಎಷ್ಟ್ ಜನ ಸತ್ತಿಲ್ಲ ನೀನೇ ಯೇಳು..?  ಇನ್ನು ಇಡೀ ದೇಶ್ದಗೆ ಎಷ್ಟ್ ಜನ್ರೋ..?!”
“ಹೂಂ, ಅದೂ ಅಲ್ದೆ, ಹುಟ್ದೋರಿಗೆಲ್ಲಾ ಮನೆ-ಕೆಲ್ಸ ಎಲ್ಲಾ ಬೇಕಲಪಾ, ಎಲ್ಲಿಂದ ತರಾದು? ಸುಮ್ಕಿರು, ಅದ್ಯಾತ್ ಮಾಡ್ತಾರೋ ಮಾಡ್ಲಿ.”
ಇನ್ನೂ ಏನೇನೋ ಮಾತುಗಳು ಅಲ್ಲಿ ಹಾದುಹೋಗುತ್ತಿದ್ದವು. ಆಗಲೇ, ಎಲ್ಲರ ಮಾತೂ ಅವರೋಹಣಕ್ಕಿಳೀತು. ಎಲ್ಲರ ಕಣ್ಣುಗಳು ಒಂದೇ ಕಡೆ ನೆಟ್ಟವು. ನಿಗಿನಿಗಿ ಕೆಂಡಕಾರುವ ಕೆಂಪು ಸೀರೆಯುಟ್ಟಿದ್ದ ಬೆಳ್ಳಿ ಆ ಜಗುಲಿ ಕಡೆ ಬಂದಳು…

ಎಲ್ಲರೂ ಒಂದರೆ ಕ್ಷಣ ಗಾಬರಿಯಾದರು. ಬೆಳ್ಳಿ, ಊರೊಳಗೆ ಬರೋದು ತುಂಬಾ ಅಪರೂಪ. ಅಪರೂಪವೇನು ಬಂತು, ಬರೋದೇ ಇಲ್ಲ. ಅಂಥವಳು ನೇರವಾಗಿ ದೇವಸ್ಥಾನಕ್ಕೇ ಬರುತ್ತಿದ್ದಾಳೆ. ಅಲ್ಲಿ ಕೂತಿದ್ದವರಲ್ಲಿ ರಾಮಯ್ಯನವರನ್ನ ಬಿಟ್ಟರೆ, ಮಿಕ್ಕೆಲ್ಲರೂ ಅವಳ ಮನೆಯಲ್ಲಿ ಊಟ ಮಾಡಿದವರೆ. ಆದರೆ ಸಭ್ಯ ಸಮಾಜದವರಂತೆ ತೋರಿಸಿಕೊಳ್ಳಲು, ಬೆಳ್ಳಿ ಅಂದರೆ ಇವಳೇ ಅಂತಲೂ ಗೊತ್ತಿಲ್ಲದ ಹಾಗೆ ಕೂತಿದ್ದರು.

ಎಲ್ಲರಿಗೂ ಭಯ, ಬೆಳ್ಳಿ ಎಲ್ಲಿ ತಮ್ಮ ಬಗ್ಗೆ ಏನು ಮಾತಾಡಿಬಿಡುತ್ತಾಳೋ ಅಂತ. ಆದರೆ ಬೆಳ್ಳಿ ಬಂದ ಕಾರಣವೇ ಬೇರೆ ಇತ್ತು. ಬೆಳ್ಳಿಯನ್ನು ಜನರು ಅಪರಿಚಿತಳಂತೆ ನೋಡೋ ಮುನ್ನವೇ ಬೆಳ್ಳಿ ಅವರನ್ನ ಕಾಲಕಸದಂತೆ ಅಸಡ್ಡೆ ಮಾಡಿಯಾಗಿತ್ತು. ಅವಳು ಬಂದದ್ದು, ರಾಮಯ್ಯನೋರನ್ನ ಮಾತಾಡಿಸೋದಕ್ಕೆ. ಕಂಬಕ್ಕೆ ಅಂಟಿ ಕೂತಿದ್ದ ರಾಮಯ್ಯನೋರ ಮುಂದೆ ಕೈಮುಗಿದ ಬೆಳ್ಳಿ,
“ಸೋಮಿಗಳೇ, ನಾನು ಏನು ಅಂತ ನಿಮಿಗೊತ್ತೈತೆ. ಯೇಳಿ, ನನ್ ಪಾಲಿಗೆ ದೇವ್ರಿದಾನೋ ಇಲ್ಲೋ?”
“ದೇವರಿಗೆ ಎಲ್ರೂ ಮಕ್ಳೇ. ನೀನ್ ಏನಾದ್ರೆ ಅವನಿಗೇನು? ನಿನ್ ತವ ಭಕ್ತಿ ಐತಾ? ಸಾಕು. ನಿಂಗ್ ದೇವ್ರಿದಾನೆ.”
“ಅಂಗಾರೆ, ನಾನು ದೇವ್ರ್ ಪೂಜೆ ಮಾಡ್ಬೋದ?”
“ಈ ಗುಡಿಲಾ?” ದಿಗ್ಭ್ರಾಂತರಾಗಿ ಕೇಳಿದರು ರಾಮಯ್ಯನೋರು.
“ಈ ಗುಡಿಯೊಳಕ್ಕೆ ನನ್ ಪಾದಾನು ಇಕ್ಕಲ್ಲ ಸೋಮಿ. ನನ್ಗೆ ಕ್ರುಷ್ಣನ್ನ ಪೂಜೆ ಮಾಡೋ ಆಸೆ ಆಗೈತೆ. ನಂಗ್ ಪೂಜೆ ಗೀಜೆ ಬರಲ್ಲ. ಒಂದೇ ಒಂದಪ, ನೀವ್ ಪೂಜೆ ಮಾಡ್ ತೋರ್ಸಿ. ನಾನ್ ಕಲ್ತ್ಕತೀನಿ. ದಮ್ಮಯ್ಯ” ಅಂದು ಕೈಮುಗಿದಳು. ಅವಳ ಕಂಗಳಲ್ಲಿ ನೀರು ತುಂಬಿಕೊಂಡಿತ್ತು.

ಆದರೆ ಈ ಮಾತಿಗೆ ಒಪ್ಪಿಗೆ ಕೊಡೋದು ಹೇಗೆ? ತಾನು ಆ ಕೊನೆಮನೆಗೆ ಹೋಗಿ, ಪೂಜೆ ಮಾಡಿಸೋದೆ? ಎಲ್ಲಾದರೂ ಉಂಟೆ? ಹಾಗಂತ, ಭಕ್ತೆಯನ್ನ ನಿರಾಸೆಗೊಳಿಸಿದರೆ ಭಗವಂತ ಮೆಚ್ಚಿಯಾನೆ? ಇದಕ್ಕೆ ಉತ್ತರ ಹೇಳೋದಕ್ಕೆ ರಾಮನೇ ಬರಬೇಕು. ಆದರೆ ಅವನು ಬರಲಾರ, ಯಾಕೆಂದರೆ, ಇಲ್ಲೀ ತನಕ ಯಾವತ್ತೂ ಅವನು ಗರ್ಭಗುಡಿ ಬಿಟ್ಟು ಆಚೆ ಬಂದಿಲ್ಲ.

ಐನೋರ ದೃಷ್ಟಿ ಊರಿನ ಹಿರಿಯರ ಕಡೆ ಹೊರಳಿತು. ಅರ್ಧ ಜನ ಬೇಡ ಅಂತ ತಲೆಗುಣುಕು ಹಾಕಿದರು. ಉಳಿದರ್ಧ ಜನ ಹೋಗಿ ಬನ್ನಿ ಅಂತ ತಲೆಯಾಡಿಸಿದರು. ರಾಮಯ್ಯನೋರು ತಮ್ಮ ಮನಸ್ಸು ಬಯಸಿದ್ದ ಫಲಕ್ಕೇ ತೂಕ ಹೆಚ್ಚಿಸಿ, ಪೂಜೆ ಹೇಳಿಕೊಡೋಕೆ ಒಪ್ಪಿದರು.

ಮಾರನೇ ದಿನ. ಗುಡಿಯ ಪಕ್ಕದಲ್ಲಿ, ರಾಮಯ್ಯನೋರು ಬೆಳ್ಳಿಗೆ ಪೂಜೆ ಮಾಡೋದನ್ನ ಹೇಳಿಕೊಡ್ತಿದ್ದರು. ಪಕ್ಕದಲ್ಲಿ ಕಿರಿಯ ಮಗ ಗಿರೀಶನೂ ಇದ್ದ. ಭಗವಂತ ಮಂತ್ರಗಿಂತ್ರಕ್ಕೆಲ್ಲಾ ಒಲಿಯುವವನಲ್ಲ. ಯಾವ ಮಂತ್ರ ಹೇಳಿದ್ದ ಅಂತ ಅರ್ಜುನನಿಗೆ ಕೃಷ್ಣ ಗೆಳೆಯನಾದ? ಯಾವ ಶ್ಲೋಕ ಹೇಳಿದ್ದ ಅಂತ ಗುಹನನ್ನ ರಾಮ ಗುಂಡಿಗೆಗೆ ಅಪ್ಪಿಕೊಂಡಿದ್ದ? ಭಕ್ತಿ ಇರಬೇಕು ಅಷ್ಟೆ, ಭಕ್ತಿ. ಅದೊಂದೇ ದೇವರನ್ನು ಒಲಿಸಿಕೊಳ್ಳೊ ಮಂತ್ರ-ತಂತ್ರ-ಯಜ್ಞ-ಎಲ್ಲಾ…

ಬೆಳ್ಳಿ, ದೇವರ ಪೂಜೆ ಆರಂಭಿಸಿದ್ದಳು. ರಾಮಯ್ಯನೋರು ಬೆಳ್ಳಿಯ ಬಗ್ಗೆಯೇ ಆಲೋಚಿಸುತ್ತಿದ್ದರು. ಮಲ್ಲಿಗೆ ಹೂವಿನಂತಹ ಅವಳ ದೇಹ, ಗೋಧೂಳಿ ಮುಗಿಲಿನಂತಹ ತುಟಿ, ಕಡುಗಪ್ಪು ಕೂದಲು, ದೇವಸ್ಥಾನ ಕಂಬದಲ್ಲಿದ್ದ ಆ ಸ್ರ್ತೀಶಿಲ್ಪವನ್ನೇ ಹೋಲುವ ಶರೀರ… ಯಾಕಾಗಿ ರಾಮಯ್ಯನೋರಿಗೆ ಹೀಗೆ ನೆನಪಾಗುತ್ತಿತ್ತೋ ಏನೋ, ಆ ಬೆಲೆವೆಣ್ಣಿನ ರೂಪ..?

ಊಹುಂ. ಬೆಳ್ಳಿಯ ನೆನಪಿಲ್ಲದೆ ರಾಮರ ಸೇವೆ ಮಾಡಲು ಸಾಧ್ಯವೇ ಆಗುತ್ತಿಲ್ಲ. ದೇವಿರಿಗೆ ಬೆಳ್ಳಿಕವಚ ಹಾಕುವಾಗಲೂ ಅವಳದೇ ನೆನಪು. ಮೊಮ್ಮಗನ ಬೆಳ್ಳಿ ಉಡಿದಾರ ನೋಡಿದಾಗಲೂ ಅದೇ ನೆನಪು. ಪಕ್ಕದೂರಿನವರು ಭೂಮಿಪೂಜೆಗೆ ಕರೆದು ಬೆಳ್ಳಿ  ಗೋದಾನ ಕೊಟ್ಟಾಗಲೂ ಅವಳದೇ ನೆನಪು! ರಾಮರ ಸೇವೇಯೇ ಮುಖ್ಯ ಅಂದುಕೊಂಡಿದ್ದವರಿಗೆ ಯಾಕೆ ಹೀಗಾಯಿತು?

ಮಧ್ಯರಾತ್ರಿ. ಹೆಂಡತಿ ಪಕ್ಕದಲ್ಲಿ ರಾಮಯ್ಯನೋರು ಮಲಗಿದ್ದಾರೆ. ಆದರೆ ನೆನಪಲ್ಲಿ ತುಂಬಿಕೊಂಡಿರೋದು ಆ ಕೊನೆಮನೆಯಲ್ಲಿ ಈಗ ಯಾರ ಜೊತೆಗೋ ಮಲಗಿರಬಹುದಾದ ಬೆಳ್ಳಿ… ನಿದ್ದೆ ಹಾಳಾಗಿ ಹೋಯ್ತು. ನೆಮ್ಮದಿಯೇ ಇಲ್ಲ. ಅದು ಬೇಕು… ಅದೇ ಬೇಕು. ರಾಮ ನೀನೆ ಅದನ್ನ ಕೊಡಬೇಕು. ರಾಮಯ್ಯನೋರಿಗೆ ರಾಮನೊಬ್ಬನೇ ದಿಕ್ಕು.

ಬೆಳ್ಳಿಯ ಸಹವಾಸ ಮಾಡಲು ಏನೆಲ್ಲಾ ದಾರಿಗಳಿವೆಯೋ ಅವೆಲ್ಲವನ್ನೂ ಹುಡುಕಾಡುತ್ತಿದ್ದರು. ಆಗಲೇ ತಾವು ಚಿಕ್ಕವರಿದ್ದಾಗ ಕೇಳಿದ್ದ ಆ ಕಥೆ ನೆನಪಾಯಿತು…

ಒಂದೂರಲ್ಲಿ ಒಂದು ದೇವಸ್ಥಾನವಿತ್ತಂತೆ. ಅಲ್ಲೊಬ್ಬರು ಪೂಜಾರ್ರಿದ್ದರಂತೆ. ಆ ದೇವಸ್ಥಾನದೆದುರು ಒಂದು ಮನೆ ಇತ್ತಂತೆ. ಅಲ್ಲೊಬ್ಬಳು ವೇಶ್ಯೆ ಇದ್ದಳಂತೆ. ಇಬ್ಬರೂ ಒಂದೇ ಕಾಲಕ್ಕೆ ಸತ್ತರು. ಆಗ ಪೂಜಾರಿಗಳನ್ನು ಕರೆದೊಯ್ಯೋಕೆ ಕಿಂಕರರು, ವೇಶ್ಯೆಯನ್ನು ಕರೆದೊಯ್ಯೋಕೆ ವಿಷ್ಣುಸೇವಕರು ಬಂದರಂತೆ. ಪೂಜಾರಿಗೆ ಅಚ್ಚರಿ-ಗಾಬರಿ! “ನಾನು ದೈವಭಕ್ತ. ಸದಾ ದೇವರ ಸೇವೆ ಮಾಡುತ್ತಿದ್ದವನು. ನನ್ನನ್ನ ನರಕಕ್ಕೆ ಕರೆದೊಯ್ದ, ಆ ಸೂಳೆಯನ್ನ ಸ್ವರ್ಗಕ್ಕೆ ಕರೆದೊಯ್ತಾ ಇದ್ದೀರಲ್ಲ? ಇದ್ಯಾವ ನ್ಯಾಯ?” ಅಂತ ಗೋಳಾಡಿದರಂತೆ. ಆಗ ಕಿಂಕರರು “ನೀನು ದೇವರ ಸೇವೆ ಮಾಡುತ್ತಿದ್ದೆ, ಆದರೆ ಮನಸೆಲ್ಲಾ ಆ ವೇಶ್ಯೆ ಏನು ಮಾಡುತ್ತಿದ್ದಾಳೆ ಅಂತ ಯೋಚಿಸುತ್ತಾ ವ್ಯಭಿಚಾರ ಮಾಡುತ್ತಿತ್ತು. ಅವಳು, ತನ್ನ ಕೆಲಸ ಮಾಡುವಾಗ, ದೇವರು ನನ್ನನ್ನು ಕ್ಷಮಿಸಲಿ ಅಂತ ದೇವರ ಸ್ಮರಣೆ ಮಾಡುತ್ತಿದ್ದಳು. ದೇಹಕ್ಕಿಂತ ಮನಸ್ಸು ಮುಖ್ಯ. ಹಾಗಾಗಿ ಅವಳು ಸ್ವರ್ಗಕ್ಕೆ, ನೀನು ನರಕಕ್ಕೆ”.

ಈ ಕಥೆಯೇ ರಾಮಯ್ಯನವರಿಗೆ ಆಧಾರವಾಯ್ತು. “ದೇಹಕ್ಕಿಂತ ಮನಸ್ಸು ಮುಖ್ಯ” ಈ ದೇಹ ಯಾವುದಕ್ಕಾಗಿ ಹಪಹಪಿಸುತ್ತಿದೆಯೋ ಅದನ್ನ ಕೊಟ್ಟುಬಿಡೋಣ. ಒಂದು ಬಾರಿ ಚಟ ತೀರಿದರೆ, ಮತ್ತೆ ಮತ್ತೆ ಅದು ಬೇಕು ಅನ್ನಿಸೋದಿಲ್ಲ. ಈಗ ತನ್ನ ಹೆಂಡತಿಯನ್ನು ಕಂಡರೆ ಹೇಗೆ ನಿರ್ಭಾವವಾಗುತ್ತೋ ಅದೇ ಥರ ಬೆಳ್ಳಿಯ ಮೇಲೂ ಅಸಡ್ಡೆ ಬಂದೇ ಬರುತ್ತೆ. ಒಳಗೇ ಹಿಂಸೆ ಅನುಭವಿಸೋದಕ್ಕಿಂತ, ಸುಖಿಸಿ ಅನುಭವಿಸೋದೇ ವಾಸಿ, ಅನ್ನೋ ನಿರ್ಧಾರಕ್ಕೆ ಬಂದಿದ್ದರು ರಾಮಯ್ಯನೋರು.

ಆದರೂ ಅವರು ಈ ನಿರ್ಧಾರಕ್ಕೆ ಅಂಟಿಕೊಳ್ಳಲು ಒಂದು ವಾರ ಬೇಕಾಯ್ತು. “ರಾಮ, ನೀನೇ ನನ್ ಮನ್ಸುನ್ನ ತಡಿಬೇಕು ತಂದೆ” ಅಂತ ಬೇಡಿಕೊಂಡರು. ತ್ರೇತಾಯುಗದಿಂದಲೂ ಅಷ್ಟೆ, ರಾಮ ಯಾರನ್ನೂ ನಿರ್ಬಂಧಿಸುವವನಲ್ಲ. ರಾಮಯ್ಯನೋರನ್ನೂ ನಿರ್ಬಂಧಿಸಲಿಲ್ಲ. ರಾಮನೇ ನನ್ನನ್ನು ತಡೆಯದಿದ್ದಮೇಲೆ, ಅವನ ಅಪ್ಪಣೆ ಸಿಕ್ಕ ಹಾಗೆಯೇ ಅಂತ ತೀರ್ಮಾನಿಸಿದ ರಾಮಯ್ಯನವರು, ಆ ರಾತ್ರಿಗಾಗಿ ಕಾದರು.

ರಾಮಯ್ಯನವರು ತೀರ್ಮಾನಿಸಿದ್ದರು. ತನ್ನ ದೇಹ ಅದೇನೇ ಮಾಡಲಿ, ಮನಸ್ಸಿನ ತುಂಬಾ ರಾಮನೇ ತುಂಬಿರಬೇಕು. ದೇಹಕ್ಕಂಟುವ ಕೊಳಕು, ಮನಸ್ಸನ ಸಣ್ಣ  ಮೂಲೆಯನ್ನೂ ತಲುಪಬಾರದು. ಇದೇ ಶಪಥ ಮಾಡಿ, ಬೆಳ್ಳಿ ಮನೆಯ ಬಾಗಿಲು ತಟ್ಟಿದರು.

ಅಂದು ಬೆಳ್ಳಿ, ತನ್ನ ಕಣ್ಣೆದುರಿನ ದೇವರನ್ನ ತೃಪ್ತಿಗೊಳಿಸುವ ಹಂಬಲ ಪಟ್ಟಿದ್ದಳು. ಹಿಂದೆಂದೂ ಯಾರೂ ಈ ಪರಿ ಚೆಲುವಿನ ಬೆಳ್ಳಿಯನ್ನು ನೋಡಿರಲಿಲ್ಲ. ಅಂಗಾಂಗವನ್ನೂ ದೇವರ ಅರ್ಚನೆಗೆ ಸಿದ್ಧಗೊಳಿಸೋ ಬೆಳ್ಳಿಬಟ್ಟಲಂತೆ ತೊಳೆದಿಟ್ಟಿದ್ದಳು. ಅವಳ ಮಂಚದ ಮೇಲೆಲ್ಲಾ ಜಾಜಿಮಲ್ಲಿಗೆ, ಸಂಪಿಗೆಯ ಎಸಳು ಚೆಲ್ಲಿಯಾಗಿತ್ತು. ತನ್ನ ದೇವರನ್ನ ಕೈಹಿಡಿದು ಮಂಚದ ಮೇಲೆ ಕೂರಿಸಿಕೊಂಡಳು ಬೆಳ್ಳಿ.

“ಸೋಮಿಗ್ಳೇ, ನೀವು ನನ್ ದ್ಯಾವ್ರು. ಈ ಎಂಜಲೆಲೆ ಮ್ಯಾಲೆ ನಿಮ್ ದೃಷ್ಟಿ ಬಿದ್ದು ನನ್ ಜೀವ್ನ ಪೌವ್ನ ಆಯ್ತು... ಆದ್ರೆ...”
“ಏನ್ ಆದ್ರೆ ಬೆಳ್ಳಿ?” ಗಲ್ಲ ಹಿಡಿದು ಕೇಳಿದರು.
“ದೇವ್ರಾರದ್ನೆ ಮಾಡೋರ್ ನೀವು, ಇಂಗ್ ಮಾಡ್ಬೋದಾ..?”
ಒಂದರೆ ಕ್ಷಣ ಮೌನದ ಬಳಿಕ, “ಇದು ದೇವಾರಾಧನೆನೇ… ಕಾಮದೇವಾರಾಧನೆ.. ಬಾ”

ಮೈ ಚೆಲ್ಲಿದವು. ಘಟಸರ್ಪದಂತೆ ತಿಂಗಳಿಂದಲೂ ಬುಸುಗುಡುತ್ತಿದ್ದ ರಾಮಯ್ಯನೋರು ಈಗ ಯಾವ ಸದ್ದೂ ಇಲ್ಲದೆ ಬೆಳ್ಳಿಬಟ್ಟಲೊಳಗೆ ಬಿದ್ದು ವದ್ದಾಡಿದರು. ಬೆಳ್ಳಿಯ ಪಾಲಿಗಿದು ದೈವಾರಾಧನೆ. ರಾಮಯ್ಯನೋರಿಗೆ ಕಾಮಕೇಳಿ. ಹಾಗಾಗಿಯೇ ಅಲ್ಲಿ ಶ್ರೀರಾಮುರು ಬರಲೇ ಇಲ್ಲ. ಅಲ್ಲಿ ದೇವರಿರಲಿಲ್ಲ.

ಎಲ್ಲಾ ಮುಗೀತು. ರಾಮಯ್ಯನೋರು ಪಂಚೆ ಕಟ್ಟಿಕೊಳ್ಳುತ್ತಿದ್ದರು. ಸೆರಗು ಅವುಚಿ ಕೂತಿದ್ದ ಬೆಳ್ಳಿ ಕೇಳಿದಳು,
“ಸೋಮಿಗ್ಳೇ, ನಂದೊಂದು ಪ್ರಶ್ನೆ..”
“ಹ್ಮ್...ಕೇಳು”
“ನಾನ್ ಬೇರೆವ್ರ್ ಸವ್ವಾಸ ಮಾಡ್ತೀನಿ ಅಂತ ಎಲ್ರೂ ನನ್ನ ಸೂಳೇ ಸೂಳೇ ಅಂತಾರಲ್ಲ, ಈಗ ನನ್ ಸವ್ವಾಸ ಮಾಡಿದ್ ನೀವು ಸೂಳಾ ಆಗ್ಲಿಲ್ವಾ..?”

ಕಣ್ಣಿಗೆ ಕಾಣದ ಮಿಂಚೊಂದು ರಾಮಯ್ಯನೋರ ತಲೆಗೆ ಅಪ್ಪಳಿಸಿತ್ತು. ಅರ್ಧಬಿಗಿದ ಪಂಚೆಯಲ್ಲೇ ಅಲ್ಲಿಂದ ಬಿರುಸು ಹೆಜ್ಜೆಗಳನ್ನಿಟ್ಟರು ರಾಮಯ್ಯನೋರು. ಅವರು ಸೀದಾ ಹೋಗಿದ್ದು, ತನ್ನ ದೇವರಿದ್ದ ರಾಮಮಂದಿರಕ್ಕೆ. ಇನ್ನೇನು ದೇವಸ್ಥಾನದ ಮೆಟ್ಟಿಲು ಹತ್ತಬೇಕು, ಯಾರೋ ಕೂಗಿದರು “ನಿನ್ನಂಥವನಿಗಲ್ಲ ಶ್ರೀರಾಮರ ಸೇವೆಯ ಸೌಭಾಗ್ಯ. ನಿನಗಿಲ್ಲ ರಾಮರ ಸ್ಮರಣೆ ಮಾಡೋ ಅಧಿಕಾರ. ರಾಮರ ಹೆಸರು ಹೇಳೋ ಯೋಗ್ಯತೆ ನಿನ್ನಂಥವನಿಗಿಲ್ಲ. ಅಯೋಗ್ಯ. ಅಯೋಗ್ಯ. ಅಯೋಗ್ಯ ನೀನು”

ರಾಮಯ್ಯನವರು ಅಲ್ಲೇ ಕುಸಿದು ಬಿದ್ದರು. ಅದೇ ಅವರ ಕೊನೆಯ ಕುಸಿತ…

-ನಾದೀ

Saturday, 22 April 2017

ಕನ್ನಡಕದ ಕಥೆ- ಸುಲೋಚನ ಚರಿತೆ


        ನೀವು ನನ್ನ ಹಾಗೆ ಕನ್ನಡಕ ಹಾಕಿಕೊಳ್ಳುವವರಾದರೆ, ಈ ಅನುಭವ ನಿಮಗೂ ಆಗಿರುತ್ತೆ… ಇದು ನನ್ನ ಮತ್ತು ನಿಮ್ಮ “ಸುಲೋಚನ ಚರಿತೆ...”

ಅವತ್ತು ಬೆಳಗ್ಗೆ LapTopನಲ್ಲಿ ಏನೋ ಕೆಲಸ ಮಾಡ್ತಿದ್ದೆ. ಆ ಕೆಲಸ ಮುಗಿಸಿ ಸ್ನಾನ ಮಾಡಲು ಹೋದೆ. ಆಗಲೇ ನನಗೆ ಗೊತ್ತಾಗಿದ್ದು, ಇನ್ನೂ ಕನ್ನಡಕ ತೆಗೆದಿಟ್ಟಿಲ್ಲ ಅಂತ. ಆಗ ನನಗಾದ ಇರುಸು ಮುರಿಸು ಅಷ್ಟಿಷ್ಟಲ್ಲ. ಬಟ್ಟೆ ಅಂಗಡಿಗೆ ಹೋದಾಗಲೂ ಅಷ್ಟೆ, Shirt Try ಮಾಡಲು ವಿಫಲವಾದಗಲೇ, ನಾನಿನ್ನೂ ಕನ್ನಡಕನ ತೆಗೆದಿಲ್ಲ ಅಂತ ಗೊತ್ತಾಗೋದು.


ಕೆಲವೊಮ್ಮೆ ನಾಚಿಕೆಯಾಗುತ್ತೆ, ಯಾಕೆ ಗೊತ್ತಾ..? ಇಲ್ಲದ ಕನ್ನಡಕನ ಸರಿ ಮಾಡಿಕೊಳ್ಳಬೇಕು ಅಂತ ತೋರುಬೆರಳು ಮೂಗಿನ ತುದಿ ಮುಟ್ಟುತ್ತೆ. ಅಲ್ಲಿ ಕನ್ನಡಕವೇ ಇರೋದಿಲ್ಲ..! ಇನ್ನೇನು ಮಾಡೋದು, ಕಣ್ಣೊರೆಸಿಕೊಂಡು, ಯಾರೂ ನೋಡಿಲ್ಲ ಅಂತ ಸಾಮಾಧಾನ ಪಡ್ಕೋತೀನಿ.


ಅಲ್ಲ, ನೀವೇ ಹೇಳಿ, ಕನ್ನಡಕ ಹಾಕ್ಕೋಳ್ಳೋದು ಯಾಕೆ? ಕಣ್ಣು ಚೆನ್ನಾಗಿ ಕಾಣಲಿ ಅಂತ ತಾನೆ? ಆದರೆ ಕೆಲವು ಅಮೂಲ್ಯ ಸಮಯಗಳಲ್ಲಿ ಆ ಅವಕಾಶವೇ ಇಲ್ಲವಾಗುತ್ತೆ. ಬಿಸಿ Tea ಕುಡೀತಿದ್ರೆ, ಮಟ ಮಟ ಮಧ್ಯಾಹ್ನದಲ್ಲೂ ಕಣ್ಮುಂದೆ ಮಂಜು ಕವಿದಹಾಗಾಗುತ್ತಲ್ಲಾ… ಕನ್ನಡಕ ಬಳಸೋ ನಮಗೆ ಟೀ ಹೀರುತ್ತಾ, ಮಳೆ ನೋಡೋ ಸೌಭಾಗ್ಯವೇ ಬೇಡ್ವೇ!?


ಮತ್ತೊಂದು ಬೇಸರ ಏನು ಗೊತ್ತಾ..? ನನ್ನಕ್ಕನ ಮಗು ಕಾರುಣ್ಯನಿಗೆ ಇಷ್ಟ ಬಂದಾಕ್ಷಣ ಮುತ್ತು ಕೊಡೋ ಹಾಗಿಲ್ಲ… ಈ ಕನ್ನಡಕ ಅಡ್ಡ ಬರುತ್ತೆ. ಇದನ್ನ ತೆಗೆದಿಟ್ಟು ಮುತ್ತು ಕೊಡೋ ಅಷ್ಟರಲ್ಲಿ, ಮುತ್ತಿನಂತಹ ಕ್ಷಣವೇ ಜಾರಿಹೋಗಿಬಿಟ್ಟಿರುತ್ತೆ. ನನ್ನದೇ ಈ ಗೋಳಾದರೆ, ಇನ್ನು ಮದುವೆಯಾದವರ ಗತಿ...ದೇವರಿಗೇ ಪ್ರೀತಿ!!


ಒಮ್ಮೊಮ್ಮೆ ನನಗೆ ಅನುಮಾನವಾಗುತ್ತೆ. ಯಾರೊಟ್ಟಿಗಾದರೂ ಮಾತಾಡುತ್ತಿದ್ದರೆ, ಅವರಿಗೆ ನನ್ನ ಕಣ್ಣಿನ ಭಾವನೆಗಳು ಗೊತ್ತಾಗುತ್ತಿದೆಯಾ ಅಂತ! ಹಾಗಾಗಿನೇ ಎಷ್ಟೋ ಸಲ, ತೊಂದರೆ ಆದ್ರೂ ಪರವಾಗಿಲ್ಲ ಅಂತ ನಿಮ್ಮ ಜೊತೆ ಕನ್ನಡಕ ತೆಗೆದೇ ಮಾತಾಡುತ್ತಿರ್ತೀನಿ.


ನನ್ನ ಕನ್ನಡಕದ ಮೇಲೆ ನನಗೆ ವಿಪರೀತ ಕೋಪ ಬರೋದು ಯಾವಾಗ ಗೊತ್ತಾ..? ನನ್ನ ಮೂಗನ್ನೇನು ಮೂಗು ಅಂದ್ಕೊಂಡಿದೆಯೋ ಅಥವಾ ಜಾರುಬಂಡಿ ಅಂದ್ಕೊಂಡಿದೆಯೋ ಈ ಕನ್ನಡಕ? ಪದೇ ಪದೇ ಜಾರಿ ಹೋಗುತ್ತಿರುತ್ತೆ! ಮತ್ತೆ ಮತ್ತೆ ಸರಿ ಮಾಡಿಕೊಳ್ಳಬೇಕು ಅಂದ್ರೆ, ಸಿಟ್ಟು-ಬೇಜಾರು! ಅದೇ ಯಾರಾದರೂ ಕನ್ನಡಕದ ಗಾಜನ್ನ ಮುಟ್ಟಲಿ, ಅವರನ್ನ ಭೀಮ ಹಿಡಿಂಬನನ್ನ ಗುದ್ದಿ ಗುದ್ದಿ ಕೊಂದ ಹಾಗೆ ಸಾಯಿಸಬೇಕು ಅನ್ನಿಸುತ್ತೆ…


ನನ್ನ ಮನೇಲಿ ಮತ್ತು ಆಫೀಸಲ್ಲಿ ಕನ್ನಡಕಕ್ಕೆ ಅಂತಲೇ ಒಂದು ಜಾಗ ಮಾಡಿಟ್ಟಿದ್ದೀನಿ. ಅಕಸ್ಮಾತ್ ಅದೇನಾದರೂ ಅಲ್ಲಿಲ್ಲ ಅಂದರೆ, ಭೈರಪ್ಪನವರ “ಸಾಕ್ಷಿ” ಕಾದಂಬರಿಯಲ್ಲಿ ಪರಮೇಶ್ವರಯ್ಯನ ಸೂಕ್ಷ್ಮ ಕಾಯ, ಸದ್ದು ಬಂದ ದಿಕ್ಕನ್ನು ಹುಡುಕುವ ಪ್ರಯತ್ನ ಮಾಡುತ್ತಲ್ಲಾ, ಹಾಗಾಗಿ ಬಿಡ್ತೀನಿ. ಮತ್ತೆ ಸಗರನ ಮಕ್ಕಳ ಹಾಗೆ ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ, ಪಾತಾಳ ಲೋಕಗಳನ್ನೆಲ್ಲಾ ಹುಡುಕಬೇಕು..!


ಅದೆಲ್ಲಕ್ಕಿಂತಲೂ ದುರಂತವೇನು ಗೊತ್ತಾ..? 3D ಸಿನಿಮಾ ನೋಡೋಕೆ ಹೋದಾಗ, ನನ್ನ ಕನ್ನಡಕದ ಮೇಲೆ 3D ಕನ್ನಡಕ ಹಾಕ್ಕೊಂಡು 2 ಗಂಟೆ ಕೂರಬೇಕಲ್ಲಾ… ಎಂಥಾ ದುರ್ವಿಧಿ.. ಎಂಥಾ ದುರ್ವಿಧಿ…


ಇಷ್ಟೆಲ್ಲಾ ಕಷ್ಟ ಕೊಟ್ಟರೂ ನನಗೆ ನನ್ನ ಕನ್ನಡಕವೆಂದರೆ ಪ್ರೀತಿ… ಮಮತೆ… ಅಕ್ಕರೆ… ನನ್ನ ಅವಿಭಾಜ್ಯ ಅಂಗವಾಗಿ, ಜೀವನದ ಆಸರೆಯಾಗಿ ನಿಂತ ಸುಲೋಚನ… ನಾ ನಿನಗೆ ಋಣಿ…


-ನಾದೀ

Sunday, 29 May 2016

ತುಂಬಾ ನಾಟಿದ ಹಾಡು...

  ನಾವು ಹಾಡುಗಳನ್ನ ಬಹಳಷ್ಟು ಸಲ ಕೇಳಿರ್ತೀವಿ, ಆನಂದಿಸಿರ್ತೀವಿ. ಆದರೆ ಕೆಲವೊಮ್ಮೆ ಮಾತ್ರ ಅವುಗಳನ್ನ 'ಹೌದು' ಅಂತ ಒಪ್ಪಿಕೊಳ್ತೀವಿ, ಯಾವಾಗ ಅವು ನಮ್ಮ ಸ್ವಾನುಭವಕ್ಕೆ ಬರುತ್ತವೋ ಆಗ.
ಈಗ ತಾನೇ ಹಲವು ಬಾರಿ ಕೇಳಿದ್ದ ಈ ಹಾಡು ಈಗಷ್ಟೇ ಸ್ನಾನ, ಜಪ ತಪ ಪೂಜೆಯನ್ನ ಮುಗಿಸಿ, ಹೊಸ ಬಟ್ಟೆಯುಟ್ಟ ಶಿವಸಮಾನ ಸನ್ಯಾಸಿಯಂತೆ ಹೊಸ ರೂಪಿನಲಿ ನಿಂತು ಬೋಧಿಸಿತು. ನಿಮಗೂ ಆ ಹಾಡು ಅಷ್ಟೇನು ಅಪರಿಚಿತವಲ್ಲ, ಜಿ.ಎಸ್. ಶಿವರುದ್ರಪ್ಪ ಅವರ ಕವನ,
''ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ...''
ಹೌದು ತಾನೆ...
ಎಲ್ಲಿದ್ದಾನೆ ಭಗವಂತ?
ಮನುಷ್ಯರ ಕೈಗೆ ಸಿಗಬಾರದು ಅಂತ mobile network ಕೂಡ ಸಿಗದಿರೋ ಕೈಲಾಸ ವೈಕುಂಠಗಳಲ್ಲಿ ಸರಸವಾಡ್ತಾ ಕೂತಿದ್ದಾನಾ? 'ಒಂದೇ ಮನಸ್ಸಲ್ಲಿ ಕೂಗಿ ಕರೀಲಿ, ಅಲ್ಲೇ ಹಾಜರ್ ಹಾಕ್ತೀನಿ' ಅಂತ ಹಠ ಹಿಡಿದಿದ್ದಾನ? 'ಓ ಈ ಮೇಷ್ಟ್ರು ಕಳೆದ ಜನ್ಮದಲ್ಲಿ ರಾಜನ ಥರ ಮೆರೀತಿದ್ದ, so ಈ ಜನ್ಮದಲ್ಲಿ ಕಷ್ಟ ಪಡಲಿ' ಅಂತ ನಲವತ್ತಕ್ಕೇ ಕಣ್ಣು ಕಿತ್ಕೊಂಡು, ನಾಲ್ಕೈದು ಹೆಣ್ಣು ಮಕ್ಕಳನ್ನಕೊಟ್ಟು, costly ಔಷಧಿಯ ಕಾಯಿಲೆ ಕೊಡ್ತಾನ?
ಅಲ್ಲ, ನಮ್ಮಲ್ಲಿ ಕೆಲವು ಮನುಷ್ಯರಿದ್ದಾರೆ. ನಿನ್ನೆ ಮಾಡಿದ ಅಪಚಾರವನ್ನ ಇವತ್ತೇ ಮರೆತು ನಾಳೆ ಸಹಾಯ ಮಾಡುವಂಥವರು. ಅಂಥ ಬುದ್ಧಿ ಕೊಟ್ಟ ಭಗವಂತನೇ ಆ ಬುದ್ಧಿಯಿಲ್ಲದೆ ಈ ಥರ ವರ-ಶಾಪ-ಪರಿಹಾರ ಅಂತ 'ಹುಲಿ ಕಟ್ಟೆ' ಆಟ ಆಡ್ತಾನ್ಯೆ??
ಅದ್ಸರಿ, ಈ ದೇವರ concept ಏನು ಹೇಳಿ? ಪವಾಡ ಮಾಡೋದೇ? ಅಲ್ಲ. ಮತ್ತೇನು? ನಂಬಿ ಬಂದವರನ್ನ ಕಾಪಾಡೋದು. ಕೆಲವರು ಹೇಳುವಂತೆ, ಎಷ್ಟು ಸೇವೆ ಮಾಡ್ತಾರೋ ಆ ಸೇವೆಯ ಫಲಕ್ಕೂ ಮತ್ತು ಪಾಪಕರ್ಮಕ್ಕೂ ಸರಾಸರಿ ಅಳತೆ ಮಾಡಿ, ಅಷ್ಟು ಕಷ್ಟವನ್ನ ನಷ್ಟಗೊಳಿಸೋದು. ಅವನೇ ತಾನೆ ದೇವರು? ok. accepted. ಅಂಥ ದೇವರು ಗುಡಿಯೊಳಗೆ ಯಾಕೆ ಬಂಧಿಯಾಗಿರಬೇಕು? early morning to late night ತನಕ ಯಾಕೆ ಆ ಕತ್ತಲ ಕೋಣೇಲಿ, ಆ ಪೂಜೆ ಮಾಡೋನ ಜೊತೆಲಿ ಇರಬೇಕು? ಬರಲಿ ಬಿಡಿ ಹೊರಗೆ. ಭಕ್ತನೇ ಬಂದು ಹರಕೆ ಕಟ್ಟಿ ಹೋಗೋ ತನಕ ನಾನು ಸಹಾಯಕ್ಕೆ ಬರೊಲ್ಲ ಅನ್ನೊ ಮೊಂಡಾಟ ಯಾಕೆ ಹೇಳಿ ಈ ದೇವರಂಥಾ ದೇವರಿಗೆ??!!!
ಕಷ್ಟ ಮತ್ತೆ ಸುಖ ನಮಗೆ, ಅಂದರೆ, ಮನುಷ್ಯರಿಗೆ ಬೇರೆ ಬೇರೆ. ಆದರೆ ಭಗವಂತನಿಗೆ ಅವೆರಡೂ ಒಂದೆ. ಅವನಿಗೆ ಚೆನ್ನಾಗಿ ಗೊತ್ತಿದೆ, ಯಾರಿಗೆ ಯಾವ ಕಷ್ಟ ಅಥವಾ ಯಾವ ಸುಖ, ಯಾವಗ ಕೊಡಬೇಕು ಅಂತ. ನೆನಪಿಡಿ, ನೀವಿಗ ಕಷ್ಟದಲ್ಲಿದ್ದೀರಿ ಅಂದರೆ ಖುಷಿಪಡಿ, ನಿಮಗೆ ಇಷ್ಟರಲ್ಲೆ ಪರಮ ಸುಖ ಒದಗಿ ಬರಲಿದೆ. ಖುಷಿಯಾಗಿರುವವರು ಮುಂಬರಲಿರುವ ಕಷ್ಟಕ್ಕೆ ಈಗಲೇ ಎದೆಗಟ್ಟಿಮಾಡಿಕೊಳ್ಳಿ. ಎರಡೂ ಶಾಶ್ವತವಲ್ಲ, ಸುಖ as well as ದುಃಖ.
ಕ್ಷಮಿಸಿ, ಇದನ್ನೆಲ್ಲಾ ಹೇಳುವಷ್ಟು ಪ್ರೌಢ್ಯತೆ ನನಗಿಲ್ಲ. ಹೇಳಬಾರದು ಕೂಡ. ನಾನು ಹೇಳಬಂದದ್ದು G.S.S ಅವರು ದೇವರನ್ನ ಹೇಗೆ ಗುರುತಿಸಿದ್ದಾರೆ ಅಂತ. 'ಪ್ರೀತಿ ಮತ್ತು ಸ್ನೇಹ' ಇವೇ ಅಂತೆ ದೈವದ ಸ್ವರೂಪ. ಅಲ್ಲದೆ ಮತ್ತೇನು? ಅಮ್ಮನ ಪ್ರೀತಿ, ಅಪ್ಪನ ಸ್ನೇಹ. ಹೆಂಡತಿ ಪ್ರೀತಿ, ಮಕ್ಕಳ ಸ್ನೇಹ. ಹಿರಿಯರ ಪ್ರೀತಿ, ಗೆಳೆಯರ ಸ್ನೇಹ, ಇನ್ನೇನು ಬೇಕು ಹೇಳಿ ಆನಂದಮಯ ಜೀವನಕ್ಕೆ? ಎಂದಿಗೂ ಸಾಕೆನಿಸದ ಪ್ರೀತಿ, ಸತತವೂ ಬೇಕೆನಿಸುವ ಸ್ನೇಹ, ಇವುಗಳಿಗಿಂತಲೂ ಮಿಗಿಲಾದ್ದು ಎಷ್ಟು ಲಕ್ಷ ಕೋಟಿ ಕೊಟ್ಟರೆ ಸಿಕ್ಕೀತು ಹೇಳಿ. ಸರಿ, ಇದೆಲ್ಲವೂ ಎಲ್ಲರಿಗೂ ಸಿಕ್ಕೀತೆ? ಬಹುಶಃ ಎಲ್ಲರಿಗೂ ಸಿಗಲಾರದು. ಆದರೆ, ಸಿಕ್ಕಷ್ಟನ್ನಾದರೂ ಸಂತಸದಿಂದ ಅಪ್ಪಿಕೊಳ್ಳ ಬೇಕು. ಅವುಗಳನ್ನ ಅರಸುತ್ತ ಹೋಗುವುದೇ ಭಗವದನ್ವೇಷಣೆ. ಸಿಕ್ಕ ಮೇಲೆ ಮಿಕ್ಕವರಿಗೆ ಹಂಚುವುದೇ ವಿಮೋಚನೆ. ಇದೇ ತಾನೆ ಸನಾತನ ಪರಂಪರೆಯ ಆದರ್ಶ? ಪ್ರೀತಿಸುವುದು ಪ್ರತಿ ಮಾನವನ ಆದ್ಯ ಉದ್ದೇಶವಾಗಬೇಕು, ದೇಶಕಾಲಾತೀತವಾಗಿ.
ಹತ್ತಿರವಿದ್ದೂ ದೂರ ನಿಲ್ಲುವೆವು,
ನಮ್ಮ ಅಹಂಮಿನ ಕೋಟೆಯಲಿ,
ಎಷ್ಟು ಕಷ್ಟವೋ ಹೊಂದಿಕೆಯೆಂಬುದು,
ನಾಲ್ಕು ದಿನದ ಈ ಬದುಕಿನಲ್ಲಿ....
mostly ನಮ್ಮ ನೆಂಟ-ಅಥವಾ ಗೆಳಯನನ್ನ ಉದ್ದೇಶಿಸಿ ಬರೆದಿದ್ದಾರೇನೋ ಅನಿಸುತ್ತೆ ಅಲ್ವೆ? ಅಲ್ಲ, ಆ ಸಾಲು ಬರೆದಿರೋದು ನಮಗೆ. ನಾವೆ ಆ lineಗಳಿಗೆ ಹೋಲಿಕೆಯಾಗೋದು. ಬರೀ ಇನ್ನೊಬ್ಬರ ತಪ್ಪು, ಕೀಳು ಮನಸ್ಥಿತಿ, ಅವತಾರ, ಅವಂತರಗಳನ್ನ ಅವರಿಗೆ ಹೇಳಿಕೊಳ್ಳದೆ, ನಾವು ಅನುಭವಿಸದೆ, ಒಳಗೊಳಗೇ ಬೈದುಕೊಂಡು, ಅವರಿವರ ಹತ್ತಿರ ಆಡಿಕೊಂಡು ತಿರುಗಾಡ್ತೀವಲ್ಲ, ಹಾಗಾಗಿ ನಮಗೇ ಬರೆದ ಸಾಲು ಅದು. ಯಾರನ್ನಾದರು ದೂಷಿಸುವ ಮುನ್ನ ಆ ವ್ಯಕ್ತಿ ನೀವೇ ಆಗಿದ್ದರೆ ಬೈಕೋತಿದ್ರಾ ಅಂತ ಯೋಚಿಸಿ, ಇನ್ನೊಬ್ಬರು ಹೀಗೆ ಮಾಡ್ಬಿಟ್ರು ಅಂತ ಎಗರಾಡುವಾಗ ಅವರ ಜಾಗದಲ್ಲಿ ನೀವಿದ್ದಿದ್ರೆ ಏನು ಮಾಡ್ತಿದ್ರಿ ಯೋಚಿಸಿ. ಹಾಗೆ ಕಲ್ಪನೆ ಮಾಡಿಕೊಳ್ಳಿ, ನೀವು ದ್ವೇಷಿಸುವ ವ್ಯಕ್ತಿಗಳ ಅದೆಷ್ಟು ಗುಣದೋಷಗಳು ನಿಮ್ಮಲ್ಲೇ ನೀವು ಗುರುತಿಸಿಕೊಂಡಿಲ್ಲಾ? ಇಷ್ಟೆಲ್ಲ ಹೇಳುವ ನಾನೇನು ಸಾಚ ಅಲ್ಲ ಬಿಡಿ, ನಾನು ನಿಮ್ಮಂಥವನೆ. ಆದರೆ ಈಗ ಹೊಸದೊಂದು ದಾರಿ ತೊರಿಸಿಬಿಟ್ಟರು G.S.S.
ಶ್ರೀ ಶಾರದಾಮಾತೆ ಹೇಳಿದ್ದಾರೆ, ''ಪರರ ಅವಗುಣಗಳನ್ನ ಪರಿಗಣಿಸದಿರಿ'' ಅಂತ. ಇನ್ನುಮುಂದೆ ಕೇವಲ ಒಳಿತನ್ನೇ ಗ್ರಹಿಸುವ ಪ್ರಯತ್ನವನ್ನ ನಾನಂತೂ ಈಗಿಂದಲೇ ಸಂಕಲ್ಪ ಮಾಡ್ತೇನೆ. ನೀವು ಮಾಡಿ ಅಂತ ಹೇಳಲ್ಲ. ಮುಂದೆ, ಈ ಹಾಡು ನಿಮ್ಮ ಮೇಲೂ ಪ್ರಭಾವ ಬೀರದಿರದು ಅಂತ ನನಗೆ ಭರವಸೆ ಇದೆ...
ಜೀವನ ನಾಲ್ಕುದಿನದ್ದಂತೆ, ಹಗಲು- ಮಧ್ಯಾಹ್ನ-ಸಂಧ್ಯೆ ಇರಳುಗಳು ಒಂದೇ ದಿನದೊಳಗೆ ಇರುವಂತೆ. ಹೆಚ್ಚುಕಡಿಮೆ ನಮ್ಮ ಜೀವನದ ತಿಳಿ ಬೆಳಗು ಮರೆಯಾಗಿ, ಬಿಸಿಲು ನೆತ್ತಿಸುಡುವ ಹೊತ್ತು ಇದು. ಆಗಲಿ, ಕಷ್ಟಕ್ಕೆ ತಯಾರಾಗೋಣ. ಆಗ ಸುಖ ಬಂದರೂ manage ಮಾಡಬಹುದು. ಅಕಸ್ಮಾತ್ ಕಷ್ಟವೇ ಬಂತು ಅಂತ ಇಟ್ಕೊಳಿ, ಬರ್ತಾನೆ, ಗರ್ಭಗುಡಿಯ ನಿರ್ಭಂಧವನ್ನ ಮಡಿಬಟ್ಟೆಯಂತೆ ಮೂಲೆಗೊಗೆದ ಭಗವಂತ, ಯಾವುದೋ ಮನುಷ್ಯ ರೂಪ ಧರಿಸಿ....
ಇಲ್ಲಿದೆ ನಂದನ
ಇಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ...
''ಈಶಾವಾಸ್ಯಮಿದಂ ಸರ್ವಂ'' ಕಷ್ಟ ಸುಖ, ನೋವು ನಲಿವು, ಹುಟ್ಟು ಸಾವು ಎಲ್ಲವೂ ದೈವದ ಅಭಿವ್ಯಕ್ತಿಯೇ. ಎಲ್ಲವನ್ನೂ ಆನಂದಿಸೋಣ.
ನಾದೀ

ಇದಕ್ಕೇ ಸ್ವಾಮೀಜಿಯನ್ನ "ಧೀರ ಸಂತ" ಅನ್ನೋದು...


"ಸ್ವಾಮಿ ವಿವೇಕಾನಂದ" ಅಂತಿದ್ದ ಹಾಗೆ ನಮಗೇ ಗೊತ್ತಿಲ್ಲದಂತೆ ಅದೆಂಥದ್ದೋ ಗೌರವ ಭಾವ ಉಕ್ಕಿ ಬರುತ್ತೆ. ಅವರ ಬಗ್ಗೆ ಓದಿ ತಿಳಿದುಕೊಂಡವರಿಗೆ ಮಾತ್ರವಲ್ಲ, ಅವರ ಫೋಟೋ ನೋಡಿದವರಿಗೂ ಕೂಡ ಸ್ವಾಮಿಜಿ ಬಲು ಬೇಗ ಕನೆಕ್ಟ್ ಆಗಿ ಬಿಡುತ್ತಾರೆ. ಬಹುಷಃ ಭಾರತದ ಎಲ್ಲಾ ಮಹಾ ವ್ಯಕ್ತಿಗಳಿಗೂ ಒಂದಲ್ಲಾ ಒಂದು ರೀತಿಯಲ್ಲಿ ಸ್ವಾಮಿಜೀಯೇ ಸೂತರ್ಿ. ಜಾತಿ ಮತಗಳ ಪಗಂಡಗಳ ಎಲ್ಲಾ ಬೇಧ ಭಾವಗಳನ್ನೂ ಮೀರಿ 'ಭಾರತದ ಪ್ರತೀಕ'ವಾಗಿ ನಿಲ್ಲಬಲ್ಲ ಏಕಮಾತ್ರ ಮೂತರ್ಿ, "ಸ್ವಾಮಿ ವಿವೇಕಾನಂದ"ರು.
ನಮಗೆ ಸ್ವಾಮಿಜಿ ಓರ್ವ 'ಫಾರಿನ್ ರಿಟರ್ನ್ಡ್' ಅಂತ ಗೊತ್ತು, 'ಕೊಲೊಂಬೋ ಇಂದ ಆಲ್ಮೋರದವರೆಗೆ' ಮಿಂಚಿನಂತೆ ಸಂಚರಿಸಿದ್ದು ಗೊತ್ತು, ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಅನ್ನ ಸ್ಥಾಪಿಸಿದರು ಅಂತ ಗೊತ್ತು, ದಾಸ್ಯದ ಸಂಕೋಲೆಯಲ್ಲಿದ್ದ ಸಂತತಿಗೆ ಸ್ವಾಭಿಮಾನದ ಬೆಳಕು ಚೆಲ್ಲಿದರು ಅಂತಲೂ ಗೊತ್ತು. ಆದರೆ ಇದರ ಹಿಂದೆ ಅವರು ಪಟ್ಟಿದ್ದ ಶ್ರಮವನ್ನ ಗುರಿತುಸುವಲ್ಲಿ ಯಾಕೆ ಯಾವತ್ತೂ ನಾವು ಯೋಚನೆಯೇ ಮಾಡಲ್ಲ?! ವಿವೇಕಾನಂದರು ಸಂತರಾಗಿದ್ದು ಅದಾಗಲೇ ಇದ್ದ ಯಾವುದೋ ಒಂದು ಆಶ್ರಮದಲ್ಲಲ್ಲ, ತಾವೇ ನಿರ್ಮಿಸಿದ ಮಠದಲ್ಲಿ. ಆ ನೂತನ ಮಠಕ್ಕೆ ಯಾವದರ ಸೋಂಕು ಇಲ್ಲದಂತೆ(ಅಂದರೆ ಜಾತಿ, ರಾಜಕೀಯ...) ನೋಡಿಕೊಳ್ಳಬೇಕಾದ್ದು ಎಂಥಾ ಸವಾಲಿರಬಹುದು ಯೋಚಿಸಿದ್ದೀವಾ! ಕೇವಲ ಒಂದು ಊರಿನಲ್ಲಿ ಮಾತ್ರವಲ್ಲ, ಆ ಆಶ್ರಮದ ಬೇರು ಬೇರೆ ಬೇರೆ ರಾಜ್ಯಗಳಲ್ಲಿ, ಅಷ್ಟೇಕೆ, ದೇಶಗಳಲ್ಲಿ ಹಬ್ಬುವಂತೆ ಮಾಡಿದರಲ್ಲ, ಅದೇನು ಸಾಮನ್ಯದ ಸಂಗತಿಯೇ?! ದೇವರ ಸ್ಮರಣೆ ಮಾಡುತ್ತ ಮೋಕ್ಷದ ಬಾಗಿಲಿನ ಕಡೆ ಸಾಗಿದ್ದ ಯುವಕರನ್ನ 'ದೀನ ನಾರಾಯಣ'-'ಹೀನ ನಾರಾಯಣನ' ಸೇವೆ ಮಾಡುವ ಮೂಲಕ ಮುಕ್ತಿ ಮಾರ್ಗ ತಲುಪುವಂತೆ ಮಾಡಿದ್ದು ಸುಲಭವಾಗಿತ್ತೇ!? ಅದೆಲ್ಲಾ ಬಿಡಿ, ಯಾವ ಪರಕೀಯರ ಮಾತು ಕೇಳಿಕೊಂಡು ಭಾರತೀಯರು ಸನಾತನ ಮೌಲ್ಯವನ್ನೇ ಮರೆತಿದ್ದರೋ ಅಂಥ ಸನಾತನ ಪರಂಪರೆಯ ಕುರಿತಾಗಿ ಪರಕೀಯರೇ ಗೌರವ ನೀಡುವಂತೆ ಮಾಡಿಬಿಟ್ಟರಲ್ಲ ಸ್ವಾಮಿಜಿ, ವಾಹ್, ಇದಲ್ಲವೇ ನಿಜವಾದ ಸಾಧನೆ? ಇದೇ ತಾನೆ ರಾಷ್ಟ್ರ ಭಕ್ತಿ.
ಏನು, "ಅಮೇರಿಕಾದ ಸೋದರ ಸೋದರಿಯರೇ..." ಅಂದ ಮಾತ್ರಕ್ಕೆ ಜಗತ್ತನ್ನ ಈ ಮಹಾತ್ಮ ಗೆದ್ದುಬಿಟ್ಟ ಅಂತ ಭಾವಿಸಿದ್ದೀರ? ಅಷ್ಟೇ ತಾನೆ ಗೊತ್ತು ನಮಗೆ ಸ್ವಾಮಿಜಿಯ ಬಗ್ಗೆ. ಅಮೇರಿಕಕ್ಕೆ ಹೋದರು, ಜನಮನ ಗೆದ್ದರು, ಭಾಷಣ ಮಾಡಿ ಬಂದರು, ಆಶ್ರಮ ಸ್ಥಾಪಿಸಿ ಕಣ್ಮುಚ್ಚಿದರು. ಇದಾ ಸ್ವಾಮೀಜಿ ಜೀವನ? ಇಷ್ಟು ಸುಲಭವಾಗಿದ್ದದ್ದೇ ಇಲ್ಲ. ಅವರು ಜೀವನಕ್ಕೆ ಕೊಡೋ definationನ್ನೇ ಬೇರೆ, "ನಮ್ಮನ್ನ ಕೆಳಗೆಳಿಯುವ ಪರಿಸರ ಹಾಗೂ ಪರಿಸ್ಥಿತಿಗಳಿಂದ ಮೇಲೇಳುವುದೇ ಜೀವನ" ಅನ್ನೋ ಹೋರಟದ ಅರ್ಥ ಕೊಡೋ ಸ್ವಾಮಿಜಿ ಜೀವನದಲ್ಲಿ ಇನ್ನೆಷ್ಟು ಹೋರಾಡಿರಲಿಕ್ಕಿಲ್ಲ ಯೋಚಿಸಿ. ಬನ್ನಿ, ಸಾಧ್ಯವಾದರೆ ಅವರ ಕೆಲವು ಘಟನೆಗಳನ್ನ ನೋಡೋಣ.
ನರೇಂದ್ರ(ಸ್ವಾಮೀಜಿಯ ಪೂರ್ವದ ಹೆಸರು)ನ ತಂದೆ ತೀರಿಹೋಗಿದ್ದರು. ಮನೆಯಲ್ಲಿ ಊಟ ಬಟ್ಟೆಗೂ ಕಷ್ಟವಿತ್ತು. ನರೇಂದ್ರನೇ ಮನೆಯಲ್ಲಿ ಹಿರಿಯ. ಆಗಷ್ಟೆ ವ್ಯಾಸಂಗ ಮುಗಿದಿತ್ತು. ಎಲ್ಲೂ ಸರಿಯಾದ ಕೆಲಸ ಸಿಕ್ಕಿರಲಿಲ್ಲ. ಯಾವುದೋ ಪುಸ್ತಕ ಅನುವಾದಿಸೋ, ಯಾರೋ ವಕೀಲರ ಕೈಕೆಳಗೆ, ಹೀಗೆ ಚಿಕ್ಕ ಪುಟ್ಟ ಕೆಲಸ ಸಿಕ್ಕಿತು. ಅದು ಎರಡು ಹೊತ್ತಿನ ಊಟಕ್ಕೇ ಸಾಗುತ್ತಿತ್ತು. ಆದರೆ ಮನೆಯನ್ನ ನೋಡಿಕೊಳ್ಳುವುದು ಹೇಗೆ? ಈ ಥರ ಖಾಲಿ ಹೊಟ್ಟೆಯಲ್ಲಿ ಅದೆಷ್ಟು ಸಲ ದಾರಿ ಮಧ್ಯೆ ತಲೆ ಸುತ್ತು ಬಂದು ಕೂತಿದ್ದರೋ. ಒಮ್ಮೆ ಸುಧೀರ್ಘವಾಗಿ ಯೋಚಿಸಿ, ಇದಕ್ಕೆ "ಗುರು ರಾಮಕೃಷ್ಣ"ರೇ ಪರಿಹಾರವೆಂದುಕೊಂಡು ಅವರ ಹತ್ತಿರ ಬಂದ. "ಗುರುಗಳೇ, ನೀವು ದಯಮಾಡಿ, ನನಗೋಸ್ಕರ ನಿಮ್ಮ ಕಾಳಿಯ ಹತ್ತಿರ ನನಗೊಂದು ಕೆಲಸ ಕೊಡಿಸಿಕೊಡಿ" ಅಂತ ಕೇಳಿದ. ರಾಮಕೃಷ್ಣರು ಹೇಳಿದರು "ನೋಡು ನರೇನ್, ನಾನ್ಯಾವತ್ತೂ ಕಾಳಿಯನ್ನ ಅದು ಕೊಡು- ಇದುಕೊಡು ಅಂತ ಕೇಳಿಲ್ಲ. ಅದೇನೋ, ಕೇಳಲೂ ಬಾಯಿಯೂ ಬರಲ್ಲ. ಒಂದು ಕೆಲಸ ಮಾಡು. ಇವತ್ತು ರಾತ್ರಿ ನೀನೇ ಆ ಗರ್ಭಗುಡಿಗೆ ಹೋಗಿ, ನಿನಗದೇನು ಬೇಕೋ ಕೇಳಿಕೋ" ಅಂದರು. ನರೇಂದ್ರ ಅರಾಳವಾಗಿ ಇರುಳಿಗಾಗಿ ಕಾಯುತ್ತಾ ಕೂತ. ರಾತ್ರಿಯಾಯ್ತು. ಹೋದ ದೇವಸ್ಥಾನಕ್ಕೆ.
ಸಾಕ್ಷಾತ್ ಕಾಳಿ ನಿಂತಿದ್ದಾಳೆ ನರೇಂದ್ರನ ಮುಂದೆ. ಆನಂದಾಶ್ರುಗಳು ಹೊರಳಿತು ಕಣ್ಣಿಂದ. ದೀನನಾಗಿ ತಾಯಿಯ ಕಾಲಿಗೆರಗಿ ಬೇಡಿಕೊಂಡ "ಅಮ್ಮಾ, ನನಗೆ ಜ್ಞಾನಕೊಡು-ವೈರಾಗ್ಯ ಕೊಡು" ಅಂತ. ಅದೇ ಭಾವೋನ್ಮತ್ತತೆಯಲ್ಲಿ ಗುರುಗಳ ಹತ್ತಿರ ಬಂದ. ರಾಮಕೃಷ್ಣರು ಕೇಳಿದರು "ಏನಯ್ಯಾ? ಏನುನ್ನ ಕೇಳಿದೆ ಆಕೆನಾ? ಕೊಡ್ತೀನಿ ಅಂದ್ಲೋ?". ನರೇಂದ್ರ ಪೆಚ್ಚಾಗಿ ಹೇಳಿದ "ಅಯ್ಯೋ ಗುರುಗಳೇ, ಹಣಕೊಡು ಅನ್ನೋದನ್ನ ಮರೆತು ಜ್ಞಾನಕೊಡು ಅಂತ ಕೇಳಿಬಿಟ್ಟೆ. ಇನ್ನೊಂದು ಸರಿ ಒಳಗೋಗಿ ಕೇಳಲೇ?". ರಾಮಕೃಷ್ಣರು ಮತ್ತೆ ಒಳಗೆ ಕಳಿಸಿದರು. ಅದೇ ದೇವಿ ಸ್ಮಿತವದನಳಾಗಿ ನಿಂತಿದ್ದಾಳೆ. ಈಗ ನರೇಂದ್ರ ಕೇಳಿದ "ಅಮ್ಮಾ...ಅಮ್ಮ... ಇದೇ ಥರ ಯಾವಾಗ್ಲೂ ದರ್ಶನ ಭಾಗ್ಯ ನೀಡು. ಮತ್ತೇನು ಬೇಡ".
ಹೊರಬರುತ್ತಿದ್ದಂತೆಯೇ ಕೇಳಿದರು ರಾಮಕೃಷ್ಣರು "ಏನಯ್ಯಾ ನರೇನ್? ಕೊಡ್ತಾಳಂತ". ನರೇಂದ್ರ "ಅಯ್ಯೋ, ಗುರುಗಳೇ, ಇನ್ನೊಂದೇ ಒಂದು ಅವಕಾಶ ಕೊಡಿ, ಈ ಸಲವೂ ಮರೆತೇ ಹೋಯ್ತು. ಅವಳ ಪ್ರಸನ್ನ ಮುಖ ನೋಡ್ತಿದ್ರೆ ಕಷ್ಟಗಳೆಲ್ಲವೂ ಮರೆತೇ ಹೋಗುತ್ತೆ. ಇನ್ನೊಂದೇ ಒಂದು ಸಲ..." ಅಂತ ಗೋಗರೆದ. ರಾಮಕೃಷ್ಣರು ಕಳಿಸಿದರು. ಈ ಬಾರಿಯೂ ಚೈತನ್ಯಮಯಿ ಕಾಳಿ ನಿಂತಿದ್ದಾಳೆ. ನರೇಂದ್ರನಿಗೆ ತನ್ನ ಕಷ್ಟ ಹೇಳಿಕೊಳ್ಳಲು ನಾಚಿಕೆಯಾಗಿ "ಅಮ್ಮಾ, ನನಗೆ ಜ್ಞಾನ ಕೊಡು-ವೈರಾಗ್ಯಕೊಡು-ಇದೇ ಥರ ಸದಾ ದರ್ಶನ ಸೌಭಾಗ್ಯ ಕೊಡು, ಇನ್ನೇನು ಬೇಡ" ಅಂದು ಅಡ್ಡಬಿದ್ದು ಹೊರ ಬಂದು, "ಗುರುಗಳೇ, ನಾನೇನು ಮಾಡಲಿ, ಆ ಆದ್ಯಂತ ಪರಾಶಕ್ತಿಯ ಮುಂದೆ ಅಲ್ಪವಾದದ್ದನ್ನ ಕೇಳಲಾರೆ" ಅಂತ ಅಳಲಿದ. ಅವನ ಪರಿಸ್ಥಿತಿ ಅರ್ಥಮಾಡಿಕೊಂಡ ರಾಮಕೃಷ್ಣರು "ಆಯ್ತು, ಇರಲಿ ಹೋಗು, ಇವತ್ತಿಂದ ನಿನ್ನ ಮನೆಯವರಿಗ್ಯಾರಿಗೂ ಅನ್ನ ಬಟ್ಟೆಯ ಕೊರತೆ ಇರಲ್ಲ" ಅಂತ ಅಭಯ ನೀಡಿದರು.
ಅದಾದ ಮೇಲು ನರೇಂದ್ರನ ಕಷ್ಟ ಮಾತ್ರ ತಪ್ಪಲಿಲ್ಲ. ರಾಮಕೃಷ್ಣರು ದೈವಾಕ್ಯವಾಗುವ ಮುನ್ನ ನರೇಂದ್ರ ಹಾಗೂ ಇನ್ನಿತರ ಯುವಕರಿಗೆ ಸನ್ಯಾಸ ದೀಕ್ಷೆಯನ್ನ ಸ್ವೀಕರಿಸುವಂತೆ ಸೂಚಿಸಿದ್ದರು. ಆ ಯುವಕರು "ಗುರುಗಳು ಹೇಳಿದ್ದಾರೆ, ನಾವು ಸನ್ಯಾಸಿಗಳಾಗ್ತೇವೆ" ಅಂದರೆ, "ಅಲ್ಲಯ್ಯಾ, ಸ್ವತಃ ರಾಮಕೃಷ್ಣರೇ ಸಂಸಾರಿಗಳು, ಅವರು ಸನ್ಯಾಸದೀಕ್ಷೆ ಕೊಡೋದೆ" ಅಂತ ನಕ್ಕು ಕೈ ಚೆಲ್ಲಿದರು ರಾಮಕೃಷ್ಣರ ಭಕ್ತರು. ಈಗ ಅವರಾರ ಸಹಾಯವೂ ಇಲ್ಲದೆ ಮಠ ಸ್ಥಪಿಸಬೇಕಾದ ಜವಾಬ್ದಾರಿ ನರೇಂದ್ರನದಾಯ್ತು. ಯುವಕರಿಲ್ಲಿ ಒಂದು ಕ್ಷಣವೂ ಸನ್ಯಾಸದ ಆದರ್ಶ ಮರೆಯಾಗದಂತೆ ಅವರಿಗೆ ನರೇಂದ್ರ ಇಂಬುಕೊಡುತ್ತಿದ್ದ, ಅದಕ್ಕಗಿ ಸಾಕಷ್ಟು ನಿಂದನೆ ಅನುಭವಿಸಿದ್ದ.
ನಂತರ ಪರಿವ್ರಾಜಕರಾದಾಗಲಂತೂ ಪಾಳು ಗುಡಿಗಳಲ್ಲಿ, ಹಾಳು ಗುಡಿಸಲುಗಳಲ್ಲಿ ಕಾಡಿನ ಮಧ್ಯದಲ್ಲಿ ವಾಸವಿದ್ದುಬಿಡುತ್ತಿದ್ದರು. ಇವರೆಲ್ಲೂ ಭಿಕ್ಷೆ ಕೇಳಿಪಡೆಯುತ್ತಿರಲಿಲ್ಲ, ಜನ ಅವರಾಗಿಯೇ ಹಾಕುತ್ತಿರಲಿಲ್ಲ. ಆಗೆಲ್ಲ ಅದೆಷ್ಟೆಷ್ಟು ದಿನಗಳು ಉಪವಾಸವಿದ್ದರೋ! ಒಮ್ಮೆಯಂತು ಹೊಟ್ಟೆ ಹಸಿದು ಪ್ರಾಣವೇ ಹೋಗುವಂತಿದ್ದಾಗ, ಯಾರೋ ಒಬ್ಬ ತನ್ನ ಹತ್ತಿರವಿದ್ದ ರೊಟ್ಟಿ ಚಟ್ನಿ ಕೊಟ್ಟ. ಹಸಿದಿದ್ದರಲ್ಲ, ಒಂಚೂರು ಹೆಚ್ಚಿಗೆಯೇ ಬಾಯಿಗೆ ಹಾಕಿಕೊಂಡರೇನೋ, ಆ ಚಟ್ನಿಯ ಖಾರ ಹೊಟ್ಟೆಯನ್ನೇ ಸುಟ್ಟು ಹಾಕುವಂತಿತ್ತಂತೆ. ಕುಡಿಯಲು ನೀರೂ ಸಿಗದೆ ವದ್ದಾಡಿದ್ದರು.
ಅಷ್ಟೆಲ್ಲಾ ಯಾಕೆ? ಕನ್ಯಾಕುಮಾರಿಯಲ್ಲಿ ಸ್ವಾಮಿಜಿಯ ಬಂಡೆಯಿದೆಯಲ್ಲಾ ಅದನ್ನ ಸ್ವಾಮಿಜಿ ಈಜಿಕೊಂಡೇ ತಲುಪಿದ್ದು. ಯಾಕೆಂದರೆ ಅಲ್ಲಿಗೆ ಕರೆದೊಯ್ಯಬೇಕಿದ್ದ ಅಂಬಿಗರಿಗೆ ಕೊಡಲು ಜೇಬಲ್ಲಿ ಬಿಡಿಗಾಸಿರಲಿಲ್ಲ. ಅಂಥಾ ಸ್ವಾಮೀಜಿ, ಇನ್ನಷ್ಟು ಕಷ್ಟಕಟ್ಟು, ದೇವಿಯ ಕೃಪೆಯಿಂದ, ರಾಮಕೃಷ್ಣರ ಆಶೀವರ್ಾದದಿಂದ ಅಮೇರಿಕೆಗೆ ಹೋದರು. ಅಲ್ಲೇನು ಹೋದ ಕೂಡಲೇ 'ರೆಡ್ ಕಾಪರ್ೆಟ್' ಹಾಸಿ ಸ್ವಾಮಿಜಿಯನ್ನ ಸ್ವಾಗತಿಸಲಿಲ್ಲ. ಇವರು ಭಾಗವಹಿಸಬೇಕಿದ್ದ ಸಮ್ಮೇಳನವಿದ್ದದ್ದು ಸೆಪ್ಟಂಬರ್ನಲ್ಲಿ, ಆದರೆ ಆ ವಿಚಾರ ಸರಿಯಾಗಿ ಖಾತ್ರಯಾಗದೆ ಎರಡು ತಿಂಗಳು ಮೊದಲೇ, ಅಂದರೆ, ಜುಲೈಗೇ ಅಮೇರಿಕಾಕ್ಕೆ ಹೋಗಿದ್ದರು. ಕೈಯಲ್ಲಿ ಕಾಸಿಲ್ಲ, ಯಾರೊಬ್ಬರ ಪರಿಚಯವಿಲ್ಲ. ಆ ವಿಶಾಲ ದೇಶದಲ್ಲಿ ಒಂಟಿಯಾಗಿಬಿಟ್ಟಿದ್ದರು ನಮ್ಮ ಸ್ವಾಮೀಜಿ.
ಆ ಅನ್ಯದೇಶದಲ್ಲಿ ಸ್ವಾಮೀಜಿ ದಾರಿಯಲ್ಲಿ ಹೋಗುತ್ತಿದ್ದರೆ ಪೋಲಿ ಹುಡುಗರು ಪೇಟ ಎಳೆಯುತ್ತಿದ್ದರು, ಬೀದಿ ಹುಡುಗರು ಕೆಟ್ಟದಾಗಿ ಹೀಯಾಳಿಸುತ್ತಿದ್ದರು, ಸಭ್ಯ ಅಮೇರಿಕನ್ನರೂ ಸಹ ಅನಾಗರೀಕರಂತೆ ವತರ್ಿಸಿದರು. ಒಮ್ಮೆಯಂತೂ ಸ್ವಾಮೀಜಿ ಅಮೇರಿಕದಲ್ಲಿ ನಿರಾಶ್ರಿತರಿಗೆ ಅಂತ ಮೀಸಲಿರುವ ಗೂಡ್ಸ್ ವ್ಯಾಗನ್ನಲ್ಲೇ ಮಲಗಿದ್ದರು.
ಸ್ವಾಮೀಜಿ ನೇರವಾಗಿ ಹೋಗಿದ್ದು ಚಿಕಾಗೋ ನಗರಕ್ಕೆ. ಆದರೆ ಅದು ದುಬಾರಿ ಅಂತ ಭಾವಿಸಿ ಬಾಸ್ಟನ್ ನಗರಕ್ಕೆ ಹೊರಟರು. ಆಗ ಅವರಿಗೆ ರೈಲಲ್ಲಲಿ ಪರಿಚಯವಾದ 'ಮಿಸ್ ಕ್ಯಾಥರಿನ್ ಆಬಟ್ ಸ್ಯಾನ್ಬಾನರ್್' ಎಂಬಾಕೆ ಸ್ವಾಮಿಜಿಯ ವಿದ್ವತ್ತನ್ನ ಗುತುತಿಸಿ, ತನ್ನ ಮನೆಗೆ ಆಹ್ವಾನಿಸಿದಳು. ಅಲ್ಲಿ, ಅವಳೂ ಹೇಗೂ ಗ್ರಂಥಕತರ್ೆಯಾಗಿದ್ದರಿಂದ, ಸ್ವಾಮಿಜಿಗೆ ಒಂದಷ್ಟು ಜನ ದೊಡ್ಡಮನುಷ್ಯರ ಲಿಂಕ್ ಸಿಕ್ಕಿತು. ಆಗಲೇ ಹಾರ್ವಡರ್್ ಯೂನಿವಸರ್ಿಟಿಯ ಪ್ರೋಫéೇಸರ್, ಡಾ.ರೈಟ್, ಸ್ವಾಮಿಜಿ 'ಸಮ್ಮೇಳನದಲ್ಲಿ ಮಾತಾಡೋ ಅವಕಾಶವನ್ನ ಬಳಸಿಕೊಳ್ಳೋಕೆ ನನ್ನ ಹತ್ತಿರ ಪರಿಚಯ ಪತ್ರವಿಲ್ಲ' ಅಂದಾಗ ಆ ಪ್ರೋಫéೇಸರ್ "ಸ್ವಾಮೀಜಿ, ನಿಮ್ಮ ಹತ್ರ ಪರಿಚಯ ಪತ್ರ ಕೇಳೋದು ಒಂದೆ, ಸೂರ್ಯನನ್ನ ನೀನ್ಯಾಕಯ್ಯ ಬೆಳಕನ್ನ ಕೊಡ್ತೀಯಾ? ಅಂತ ಕೇಳೊದು ಒಂದೆ" ಅಂತ ಹೊಗಳಿ "ನೀವು ಸಮ್ಮೇಳನದಲ್ಲಿ ಮಾತಾಡಲೇ ಬೇಕು" ಅಂತ ಇವನೇ ಒಂದು ಪತ್ರ ಬರೆದುಕೊಟ್ಟ. ದುರಾದೃಷ್ಟವಷಾತ್ ಆ ಪತ್ರವೂ ಕಳೆದು ಹೋಗಿ, ಸ್ವಾಮೀಜಿ ಅಮೇರಿಕದ ಬೀದಿಗಳಲ್ಲಿ ಕೈ ಕೈ ಹಿಚುಕಿಕೊಳ್ಳಬೇಕಾಯ್ತು.
ದಾರಿ ಗೊತ್ತಿಲ್ಲ, ದೆಸೆ ಗೊತ್ತಿಲ್ಲ, ಎಲ್ಲಿ ಹೋಗಿ ಏನು ಮಾಡಬೇಕು ಸ್ವಾಮೀಜಿ ಆ ಚಿಕಾಗೋದಲ್ಲಿ?ಸಮ್ಮೇಳನ ಅಡ್ರೆಸ್ ಕೇಳಿದರೂ ಕೂಡ ಯಾರೊಬ್ಬರೂ ಹೆಳಲಿಲ್ಲ ಸ್ವಾಮಿಜಿಗೆ. ಸುತ್ತಾಡಿ ಸುತ್ತಾಡಿ ಸಾಕಾಗಿ ಆಯಾಸ ತಾಳಲಾರದೆ ಸುಸ್ತಾಗಿ ರಸ್ತೆಯ ಬದಿಗೇ ಕೂತರು. ಭಗವದ್ಕೃಪೆ, ಅವರು ಕೂತಿದ್ದ ಬೀದಿಯ ಎದುರಿಗೇ ಇದ್ದ ಬಂಗಲೆಯ ವೃದ್ಧ ಮಹಿಳೆ, ಬೆಲ್ಹೇಲ್ ಎಂಬಾಕೆ, ಸ್ವಾಮೀಜಿಯನ್ನ ಗೌರವದಿಂದ ತನ್ನ ಬಂಗಲೆಯೊಳಗೆ ಕರೆದೊಯ್ದು, ಉಪಚರಿಸಿ, 'ನಿಮಗೆ ಸಮ್ಮೇಳನದಲ್ಲಿ ಮಾತಾಡೋ ಅವಕಾಶ ಕೊಡಿಸೋ ಜವಾಬ್ದಾರಿ ನನ್ನದು' ಅಂದಳು. ಅಂತೆಯೇ ಸ್ವಾಮೀಜಿ ಭಾರತದ ಇತಿಹಾಸದ ಪುಟದಲ್ಲಿ ಸ್ವಣರ್ಾಕ್ಷರದಲ್ಲಿ ಬರೆದಿಡುವಂತೆ ಸೆಪ್ಟಂಬರ್ 11, 1893 ರಲ್ಲಿ ಭಾರತವನ್ನ ಜಗತ್ತಿಗೆ ಪರಿಚಯಿಸಿದರು.
ಈ ಸಮ್ಮೇಳನಾನಂತರವೇನು ಸ್ವಾಮೀಜಿಯ ಜೀವನ ಸುಖಮಯವಾಗಿದ್ದಿಲ್ಲ. ಜೀವನ ಪರ್ಯಂತ ಇಂಥದ್ದೇ ಹೋರಟಗಳನ್ನ ನಡೆಸಿದ್ದಾರೆ. ಅಷ್ಟೆಲ್ಲ ಕಷ್ಟಗಳನ್ನ ಜಯಿಸಿದ್ದಕ್ಕಾಗಿಯೇ ಇಂದು ಅವರನ್ನ "ವಿಶ್ವವಿಜೇತ" ಅನ್ನೋದು, ಇವತ್ತಿಗೂ ಅವರ ಜನ್ಮದಿನವನ್ನ "ರಾಷ್ಟ್ರಿಯ ಯುವದಿನ"ವನ್ನಾಗಿ ಆಚರಿಸುವ ಮೂಲಕ ಸ್ಮರಿಸುತ್ತಿರೋದು. ಆ ಅದಮ್ಯ ಚೇತನಕ್ಕೆ ಅನಂತ ನಮನ...
"...ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸನ್ಯಾಸಿ-
ಓಂ! ತತ್! ಸತ್! ಓಂ!..."
-ನಾದೀ

ಇಂಟ್ರುನೆಟ್ಟು!

  ಅವನ ಹೆಸರು ವೀರೇಶ ಅಂತ. ಸರ್ಕಾರಿ ಕಾಲೇಜೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಇಬ್ಬರು ಮಕ್ಕಳು, ಒಬ್ಬಳು ಹೆಂಡತಿ, ಇನ್ನೊಬ್ಬಳು ಹೆಂಡತಿ ಅಲ್ಲ. ಹಾಗಾಗಿಯೇ ಅವರಿಬ್ಬರು ಕಿತ್ತಾಡಿಕೊಂಡು ಈಗ ಇವನನ್ನ ಬಿಟ್ಟು ಹೋಗಿದ್ದಾರೆ. ಅದು ಬೇರೆ ಕತೆ, ಇನ್ನೊಮ್ಮೆ ಅದರ ಬಗ್ಗೆ ಹೇಳ್ತೀನಿ.

ಆ ಕಾಲೇಜಿನ ಹುಡುಗರೆಲ್ಲ ಹರೆಯವನ್ನ ಇನ್ನೇನು ಮುಗಿಸುವ ವಯಸ್ಸಿನವರು. co-ed. ವಾಡಿಕೆಯಂತೆ ಪ್ರೇಮಿಗಳು ಇರುತ್ತಿದ್ದರು. ಒಂದಾದ ಪ್ರೇಮಿಗಳು ಮರದ ಮೇಲೆ ತಮ್ಮ ಹೆಸರನ್ನ ಕೆತ್ತಿಕೊಂಡರೆ, one way ಪ್ರೇಮಿಗಳು ಯಾರೋ ಬರೆದಂತೆ ತಮ್ಮ ಹಾಗೂ ತಮ್ಮ ಭಾವೀ ಅಥವಾ ಅಭಾವಿ ಪ್ರೇಯಸಿಯ ಹೆಸರನ್ನ boardನ ಮೇಲೆ ಬರೆದುಕೊಳ್ಳುತ್ತಿದ್ದರು. ಇಂಥ ಪ್ರೇಮಿಗಳಿಗೆಲ್ಲ ವೀರೇಶ ಲವ್ ಗುರು. ಜೋಡಿ ಹುಡುಕಿ ಕೊಡೋದು, ಲವ್ ಲೆಟರ್ ಬರೆದುಕೊಡೋದು, break up ಆದಾಗ ಒಂದಾಗಿಸೋದು, ಈ ಥರದ್ದೆಲ್ಲ ಮಾಡುತ್ತಿದ್ದ. ಅದಕ್ಕೇನು ದುಡ್ಡು ಕೇಳುತ್ತಿರಲಿಲ್ಲ. ಸಂಜೆ ಸಮಯ party ಕೊಡಿಸಿದರೆ ಸಾಕಿತ್ತು.

ಕಾಲೇಜು ಹೇಗೋ ಹಾಗಿತ್ತು. ವಿಪರೀತ ಪಾಠ ಮಾಡುವ lecturers, ಕಾಲೇಜಿಗೆ ಬಂದರೂ long absent ನೀನು ಅನ್ನುವ principal, ಎಲ್ಲಾ ದಾಖಲೆ ಕೊಟ್ಟಿದ್ದರೂ ಏನೋ ಒಂದು ಕೊಂಕು ಹೇಳುವ clerk. ಇವರೆಲ್ಲರ ಮಧ್ಯೆ ಕಾಲೇಜಿನ ಏಕಮಾತ್ರ ಆಕರ್ಷಣೆಯಾಗಿ ಉಳಿದದ್ದು ವೀರೇಶಿ ಮಾತ್ರ. ಹುಡುಗರಿಗೆಲ್ಲ ಅವನನ್ನ ಕಂಡರೆ ಅಚ್ಚು ಮೆಚ್ಚು. ಹುಡುಗಿಯರಿಗೂ ಅಷ್ಟೆ. ಆಗಾಗ ಮೈ ಮುಟ್ಟಿ ಮಾತಾಡಿಸಿದ್ದಕ್ಕೆ ಒಂದಿಬ್ಬರು ಹೊಡೆದದ್ದು ಬಿಟ್ಟರೆ ಬೇರಿನ್ನೇನು caseಗಳಿರಲಿಲ್ಲ.

ಅದೊಂದು ದಿನ ಯಾವುದೋ company ಕಾರು ಬಂದು ಕಾಲೇಜಿನ ಮುಂದೆ ನಿಂತಿತು.  ಅದರಿಂದ ಇಳಿದು ಬಂದ ಮೂವರು ಟೈ ಧಾರಿಗಳು ನೇರ ಆಫೀಸ್ ರೂಮಿಗೆ ಹೋಗಿ, ಪ್ರಿನ್ಸಿಪಾಲರ ಕೈಕುಲುಕಿ, ಏನೇನೋ ಮಾತಾಡುತ್ತಿರವಾಗ ಅವರಿಗೆ tea ಕೊಡಲು ವೀರೇಶಿ ಒಳಗೆ ಹೊದಾಗ ಗೊತ್ತಾಯಿತು, ಅವರು ಬಂದಿರೋದು ಕಾಲೇಜಿಗೆ ಕಂಪ್ಯೂಟರ್ ಕೊಡೋಕೆ ಅಂತ. ವಿಷಯ ತಿಳಿದ ಕೂಡಲೆ ತನ್ನ ನೆಚ್ಚಿನ ಗ್ಯಾಂಗ್ ಗೆ ತಿಳಿಸಿದ. ಸುದ್ದಿ ಹಬ್ಬಿತು. ಮರುದಿನ ಬೆಳಗ್ಗೆ ಪ್ರಿನ್ಸಿಪಾಲರು ''ಪ್ರಿಯ ವಿದ್ಯಾರ್ಥಿಗಳೆ, ನಿಮಗೆಲ್ಲ ವಂದು ಸಪ್ರೈಸ್...'' ಅಂದು ಈ ಮಾತು ಹೇಳಿದಾಗ ಯಾರೊಬ್ಬರೂ ತಮಾಷೆಗೂ surprise ಆಗಲೇ ಇಲ್ಲ.

ಒಂದು ವಾರದಲ್ಲಿ 5ಕಂಪ್ಯೂಟರ್ ಬಂತು. ಅವನ್ನ ಯಾರೆಂದರೆ ಅವರು ಮುಟ್ಟುವ ಹಾಗಿಲ್ಲ. ಅದರ ಜವಾಬ್ದಾರಿ ವೀರೇಶಿಯದ್ದು. ಅವನು ಹ್ಞೂಂಕರಿಸಿದರೆ ಮಾತ್ರ ಬಳಸಲಾಸ್ಪದ. ಹೀಗಿದ್ದ ಪರಿಸ್ಥಿಯಲ್ಲಿಯೇ, english ಟೀಚರ್ ಹೆದಳಿದರು ಅಂತ internet ಹಾಕಿಸಿದರು ಪ್ರಿನ್ಸಿಪಾಲ್.

ಕಾಲೇಜಿಗೆ internet ಬಂದ ಮೇಲೆ ಅದರ lookಕೇ ಬದಲಾಗಿ ಹೋಯ್ತು. ಯಾರೊಬ್ಬರೂ absent ಆಗಲಿಲ್ಲ. ಅದು ಇದು ಅಂತ download ಮಾಡುತ್ತಲೇ ಇದ್ದರು. ಅವಾವುವೂ ಪ್ರಯೋಜಕ್ಕೆ ಬರದ sylubus ಎಂಬುದು ವೀರೇಶನಿಗೆ ಗೊತ್ತಾಯಿತು. ಒಂದ ವಾರಗಳ ಬಳಿಕ ಪ್ರಿನ್ಸಿಪಲ್ ಊರಲ್ಲಿರಲಿಲ್ಲ, ಆಗ ವೀರೇಶಿ ಅದರಲ್ಲೂ buisiness ಮಾಡತೊಡಗಿದ. ವಿಡಿಯೋ ನೋಡೋದಾದರೆ ಗಂಟೆಗಿಷ್ಟು, print ಬೇಕಿದ್ದರೆ ಪೇಜಿಗಿಷ್ಟು ಅಂತ ರೇಟ್ ಫಿಕ್ಸ್ ಮಾಡಿದ. ಅದೇನು, ಕೇಳವಲ ಹತ್ತು ರೂಪಾಯಿ. ಯಾರೊಬ್ಬರಿಗೂ ಅದು costly ಎನಿಸಲಿಲ್ಲ. ವ್ಯಪಾರ ಶುರುವಾಯ್ತು.

ಸ್ವಲ್ಪ ದಿನವಾದ ಮೇಲೆ ವೀರೇಶಿಗೆ ತಾನೂ ವಿಡಿಯೋ ನೋಡಬೇಕು ಅನ್ನಿಸಿತು. ಯಾವೊಬ್ಬರೂ ಇರಲಿಲ್ಲ ಆ ಹೊತ್ತು. video site ತೆಗೆದ, 'kannada o' ಅಂತ ಒತ್ತುತ್ತಿದ್ದಂತೆಯೇ ಒಂದಷ್ಟು suggestion ಬಂತು. ಯಾವುದೋ ಒಂದನ್ನು ಒತ್ತಿದ. ಕನ್ನಡ ಹಳೇ ಹಾಡುಗಳ ಪಟ್ಟಿ ತೆರೆದುಕೊಂಡಿತು. ಚೆನಾಗೆನ್ನಿಸಿತು. ಹೀಗೆ ಕೆಲವು ವಿಡಿಯೋ ನೋಡುತ್ತಾ, ಹುಡುಕುತ್ತಿರುವಾಗ ಕಂಡಿತು '...hot photoshoot' ಅಂತ. ಅವಳು ನೆಚ್ಚಿನ ನಟಿ ಬೇರೆ. ತೆರೆದುಕೊಂಡಿತು ವಿಡಿಯೋ. ಪುಳಕಿತನಾಗಿ ಹೋದ ವೀರೇಶ! ಒಬ್ಬನೇ ಉದ್ಗರಿಸಿದ ''ಹ್ಞಾ!! ಇದೆಲ್ಲಾ ಇದರಲ್ಲೂ ಇರುತ್ತಾ...!!!''

free internet, ಕೇಳಬೇಕೆ? 8ಕ್ಕೆ ಬರುತ್ತಿದ್ದ ವೀರೇಶ 7ಕ್ಕೇ ಬಂದು ಬಾಗಿಲು ತೆಗೆದು ಇಂಟರ್ ನೆಟ್ ನೋಡುತ್ತಿದ್ದ. ಯಾವಾಗಲೂ ಎರಡು ಪೇಜ್ ಓಪನ್ ಇರುತ್ತಿತ್ತು. ಒಂದು ''...hot...'' ಇನ್ನೊಂದು ''images of god''! ಇದು ನಿತ್ಯದ ಕಥೆ. ಬರು ಬರುತ್ತಾ ವೀರೇಶಿಗೆ ಮಾತಿನ ವ್ಯಾಮೋಹ ಕಡಿಮೆಯಾಯ್ತು. ಯಾರೂ ತನ್ನ ಹತ್ತಿರ ಬಾರದಂತೆ ಮಾಡಿಕೊಂಡ, privacyಗಾಗಿ. ವೀರೇಶಿ ಪಕ್ಕ ಇರುತ್ತಿದ್ದದ್ದು ಅವನ ಖಾಸ ಶಿಶ್ಯವರ್ಗ ಮಾತ್ರ. ಅದು ವಿಡಿಯೋ ಮುಗಿಯೋ  ತನಕ ಅಷ್ಟೆ.

ಗಣಿತದ ಮೇಷ್ಟ್ರಿಗೂ ಕೆಮಿಸ್ಟ್ರೀ ಟೀಚರ್ ಗೂ ಜಗಳ. periodic tableಗೆ ಹೊಸ ವಸ್ತು ಸೇರಿದೆ ಅಂತ ಆಯಪ್ಪ, ಸೇರಿಲ್ಲ ಅಂತ ಈಯಮ್ಮ. ಇನ್ನಾರು ಉತ್ತರಿಸಬಲ್ಲರು ಗೂಗಲಾಚಾರ್ಯರಲ್ಲದೆ? ಹೋದರು, ಕಂಪ್ಯೂಟರ್ ಲ್ಯಾಬಿಗೆ. ಅವರು ವೀರೇಶಿ ಕೂತಿದ್ದ ಕಡೆ ಹೋಗುತ್ತಿದ್ದಂತೆಯೇ ಎಲ್ಲಾ 'ಇಂಟೂ' ಒತ್ತಿ ತಡಬಡಿಸುತ್ತಾ ಮೇಲೆದ್ದು 'ಬನ್ನಿ ಸಾ...' ಅಂತ ಸೀಟು ಬಿಟ್ಟುಕೊಟ್ಟ. ಗಣಿತದವರು 'ನೋಡಿ ಮೇಡಂ, ಇದ್ರಲ್ಲಿರುತ್ತೆ' ಅಂತ search engine ತೆರೆಯುತ್ತಿದ್ದಂತೆಯೇ ಕಂಡವು, bikiniಯಾದಿ ಉಡುತೊಟ್ಟ ಲಲನೆಯರು. ಮೆಡಮ್ಮಿಗೆ ಸಿಟ್ಟು ಬಂತೋ, ನಾಚಿಕೆ ಬಂತೋ ಗೊತ್ತಿಲ್ಲ. 'ಯಾ ಓಗಿ ಸಾರ್' ಅಂತ ಗಣಿತದವರ ಬೆನ್ನು ಗುದ್ದಿ ಓಡಿದಳಯ. ಮೇಷ್ಟ್ರು ಇದೆಲ್ಲ ಇಲ್ಯಾಕೆ ಬಂತೋ ಗೊತ್ತಾಗದೆ ತಬ್ಬಿಬ್ಬಾದರು. ವೀರೇಶಿ ನಡುಗುತ್ತಿದ್ದ, ಮುಂದಿನ ಪರಿಣಾನವನ್ನ ನೆನೆಯುತ್ತ. ಮೇಷ್ಟ್ರು ವೀರೇಶಿಗೆ ದೈನ್ಯದಿಂದ ಹೇಳಿದರು ''ವೀರು, ನಂಗೂ ಇದುಕ್ಕೂ ಏನು ಸಂಭಂಧ ಇಲ್ವೋ. ಇನ್ನು ನಾನೇನೂ ನೋಡೇ ಇರಲಿಲ್ಲ. ಇದು ಹೇಗೆ ಬಂತೋ ಗೊತ್ತಿಲ್ಲ'' ಅಂತ ಅಳಲಿದರು. ವೀರೇಶೀ, 'ಸಾ... ಇದೆಲ್ಲ ಏನೂ ಮಾಡಾಕಾಗಲ್ಲ ಸಾ. ಇಂಟ್ರುನೆಟ್ಟಂದ್ರೆ ಇಂಗೇನೆ. ಏನಾರ ಒತ್ರಿ, ಇದೇ ಬರದು. ವಾಗಿ ಸಾ, ಏನೂ ಆಗಲ್ಲ' ಅಂದು ಭರವಸೆ ತುಂಬಿ ಕಳಿಸಿದ. ಸಧ್ಯ, ವೀರೇಶಿ ಮರ್ಯಾದೆ ಉಳಿಯಿತು, ಅಲ್ಲದೆ ಸುದ್ದಿ ಬೇರೆ, ಆ ಗಣಿತ ಮೇಷ್ಟ್ರು ಕೆಮಿಸ್ಟ್ರಿ ಮೇಡಮ್ಮು ಫ್ರೆಂಡ್ಸ್ ಆದ್ರೂ ಅಂತ. ಕಾರಣ ಗೊತ್ತಿರೋದು ವೀರೇಶಿಗೆ ಮಾತ್ರ.

ಒಂದೊಳ್ಳೆ ಮಳೆ ಬೀಳುತ್ತಿದ್ದ ಸಂಜೆ. ಹುಡುಗರೆಲ್ಲ ಕಂಪ್ಯೂಟರಲ್ಲಿ ಏನೋ project ಮಾಡಿಕೊಳ್ಳುತ್ತಿದ್ದರು. ವೀರೇಶಿ ಒಂಟಿಸಲಗದಂತೆ ಸುಖಸಾಗರಾನುಭವ ಪಡೆಯುತ್ತಿದ್ದ, ಅದು ಜಗದೇಕ ಸುಂದರಿಯರ ಸಮಕ್ಷಮದಲ್ಲಿ. ನೋಡುವಾಗ ಅದೇನು ಒತ್ತಿದನೋ ಏನೋ, ಕಂಪ್ಯೂಟರ್ ಒಂದು ಕ್ಷಣ 'ಚುರ್ರ್...' ಅಂದು ಆಫ್ ಆಗಿದ್ದು ಆನ್ ಆಗಲೇ ಇಲ್ಲ! ಹುಡುಗರು ಹೇಳಿದರು 'ವೈರಸ್ ಅಟಾಕ್ ಅಗೈತೆ' ಅಂತ. ವೀರೇಶಿಗೆ ಬೇಜಾತಾಯ್ತು, ಇಂಥದ್ದನ್ನ ನೋಡದೆ ಹೋದೆನಲ್ಲಾ ಅಂತ.

ಪ್ರಿನ್ಸಿಪಲ್ ಬಂದ ಕೂಡಲೇ ಮಾಡಬೇಕಿದ್ದ ಮೊದಲ ಕೆಲಸ techniciansನ ಕರೆಸಿ computer ಸರಿ ಮಾಡಿಸೋದು. ಅದಕ್ಕೆ ಕಂಪ್ಯೂಟರ್ ನೀಡಿದ್ದವರನ್ನೇ ಕರೆಸಿದ. ಪಾಪ, ಬಂದರು. ಒಂದು anti virus ಹಾಕಿಕೊಡಲು ಶುರು ಮಾಡಿದರು. ಅಷ್ಟರಲ್ಲೆ inspectionಗಾಗಿ ಇಬ್ಬರು officerಗಳು ಬಂದರು. ಅವರ ಜೊತೆ ಮಾತಾಡಬೇಕು ಅಂತಿದ್ದ ತನ್ನ ಸ್ನೆಹಿತರಿಬ್ಬರನ್ನೂ ಪ್ರಿನ್ಸಿಪಾಲರು ಕರೆಸಿದರು. ಮಾತು ಕತೆ meeting ಶುರುವಾಯ್ತು. ವೀರೇಶಿ ತನ್ನ ಪಾಡಿಗೆ ತಾನು 'ಇನ್ನು ಏನ್ ನೋಡೋದು ಬಾಕಿ ಇದೆ' ಅಂತ ಯೋಚಿಸುತ್ತಿದ್ದ. ಅತ್ತ, computer ರಿಪೇರಿ ಮಾಡುವ ಕಡೆಯಿಂದ ವಿಲಕ್ಷಣ ಹೆಣ್ಣಿನ ದನಿ ಕೇಳಿತು. ಇಡೀ ಸಭೆ ಅತ್ತ ಕಿವಿ ಹಾಯಿಸಿತು! ಆ ಅಪರಿಚಿತ ದನಿ ಅಲ್ಲಿ ಗೊತ್ತದ್ದದ್ದು ವೀರೇಶಿಗೆ ಮಾತ್ರ.

ಒಂದ ವೇಳೆ, ಆ computer ಸರಿ ಮಾಡುವವರು ತಾನು ನೋಡಿದ history ತೋರಿಸದೇ ಇದ್ದಿದ್ದರೆ 'ಸಾ...ಇದೆಲ್ಲ ಇಂಟ್ರುನೆಟ್ಟಲ್ಲಿ ಮಾಮೂಲಿ ಸಾ...' ಅಂದುಬಿಡುತ್ತಿದ್ದ ವೀರೇಶಿ. ಆದರೆ ಈಗ ಹಾಗಗಲ್ಲ. ಸಾಕ್ಷಿ ಸಮೇತ ಸಿಗೆ ಬಿದ್ದಿದ್ದ. ಮುಖ ಪೆಚ್ಚಾಯಿತು. ಪ್ರಿನ್ಸಿಪಾಲರಿಗೆ ಅವರೆಲ್ಲರ ಮುಂದೆ ಮರ್ಯಾದೆ ಹತವಾಯಿತು. ಕೃದ್ಧರಾಗಿಹೋದರು.

ಕಂಪ್ಯೂಟರ್ ಕೊಟ್ಟಿದ್ದವರು ''ನೀವು ತುಂಬಾ ಚೆನಾಗಿ use ಮಾಡಿಕೊಂಡಿರೋದು ಗೊತ್ತಾಗ್ತಾ ಇದೆ. ಸಾಕು. ಇಷ್ಟೇ ನಮ್ಮಿಂದಾಗೋದು'' ಅಂದು ಕಂಪ್ಯೂಟರ್ ಒತ್ತೊಯ್ದರು. ವೀರೇಶ ಅವರೆಲ್ಲರ ಕಣ್ಣುಗಳಲ್ಲಿ ಸಣ್ಣವನಾದ. ತನಗೇ ತಾನು ಹೇಳಿಕೊಳ್ಳಲೂ ಸಹ ಯಾವ ಸಮಾಧಾನವೂ ಕಾಣಲಿಲ್ಲ. ತಪ್ಪು ಮಾಡೋದು ತಪ್ಪಲ್ಲ, ಸಿಕ್ಕಿ ಹಾಕಿಕೊಳ್ಳುದು ತಪ್ಪು ಅನಿಸಿತು. ಎಲ್ಲರೂ ಹೋದರು. ವೀರೇಶಿ ಯಾರ ಮಾತನ್ನೂ ಕೇಳುವ ಅವಶ್ಯಕತೆತಿಲ್ಲವೆಂಬಂತೆ ಅಲ್ಲಿಂದ ಹೊರಟ. ಹೋಗುವಾಗ 'ಈ ವಯಸ್ಸಿನಲ್ಲಾದರೂ ಸ್ಕೂಲಿಗೆ ಬರೋದು ತಪ್ಪಿತಲ್ಲ' ಅಂದುಕೊಂಡ. computer ಕೋಣೆ ಮತ್ತೆ ಹಳೆ ಸಾಮಾನುಗಳ ಗೂಡಾಯಿತು.

ವೀರೇಶಿ ಕೆಲಸ ಕಳೆದುಕೊಂಡಿದ್ದ. ಆದರೆ ಕೈ ತುಂಬಾ ಹಣ ಮಾಡಿಕೊಂಡ. ಹೇಗಂತಿರಾ? ತಾನೇ ಒಂದು ಇಂಟರ್ ನೆಟ್ ಅಂಗಡಿಯಿಟ್ಟ. ಗಂಟೆಗೆ 40ರೂಪಾಯಿ. cityಗಿಂತ ಹತ್ತು ರುಪಾಯಿ ಜಾಸ್ತಿ. ಯಾಕೇಳಿ? ಇಲ್ಲಿ ಇದ್ದದ್ದು ಒಂದೇ ಇಂಟರ್ ನೆಟ್ಟು...

ನಾದೀ

Wednesday, 9 December 2015

ನಡುರಾತ್ರಿಯಲಿ...

ನಡುರಾತ್ರಿಯಲಿ...

   ಮಧ್ಯ ರಾತ್ರಿ. ಮಳೆ-ಗುಡುಗು-ಸಿಡಿಲು. ಯಾರೂ ನಡೆದಾಡದ ಬೆಂಗಳೂರು-ಪುಣೆ ಹೆದ್ದಾರಿ. ಯಾವ ಗಾಡಿಯೂ ಆ ದಾರಿಯಲ್ಲಿ ಅಡ್ಡಾಡುತ್ತಿಲ್ಲ. cbz ಗಾಡಿಯಲ್ಲಿ ಬೆಂಗಳೂರಿನ ಕಡೆ ವೇಗವಾಗಿ ಹೋಗುತ್ತಿದ್ದ ರಾಮು ಯಾವುದಾದರು ಡಾಭಾ ಅಥವ ಹೋಟೆಲ್ ಸಿಗಬಹುದೆಂಬ ಆಸೆಯಲ್ಲಿ ಸುರಿಮಳೆಗೂ ಜಗ್ಗದೆ ಮುನ್ನುಗ್ಗುತ್ತಿದ್ದ. ಆದರೆ ಹತ್ತಾರು ಕಿಲೋಮೀಟರ್ ಮುಂದೆ ಬಂದರೂ ಯಾವ ತಾಣವೂ ಸಿಗಲಿಲ್ಲ. ಅವನ ನಸೀಬು ಕೆಟ್ಟಿತ್ತೇನೋ, head light ಕೂಡ ಇದ್ದಕ್ಕಿದ್ದಂತೆ ಕೆಟ್ಟು ಹೋಯಿತು. ರಾಮು ಗಾಡಿಯನ್ನ ಪಕ್ಕಕ್ಕೆ ಹಾಕಿದ. ಮಳೆ ಸೋರುತ್ತಿದ್ದ ಆಗಸದ ಮಾಡಿನೆಡೆಗೆ ನೋಡಿದ. ಯಾವ ಚಂದ್ರ ಚುಕ್ಕಿಗಳು ಇವನಿಗಾಗಿ ಬೆಳಕು ಚೆಲ್ಲಲು ಅಲ್ಲಿರಲಿಲ್ಲ. ಮಳೆ ಬರುತ್ತಿತ್ತಲ್ಲ ಅಷ್ಟಕ್ಕೇ ಆಕಾಶ ಕಪ್ಪಿರಲಿಲ್ಲ, ಅಂದು ಅಮವಾಸ್ಯೆ. ಶಶಿಗೆ ರಜೆ, ಅವನ ಸಖಿಯರಿಗೂ ರಜೆ.

ರಾಮು light ಹೊತ್ತಿಸಲು ಏನೇನೋ ಸರ್ಕಸ್ಸು ಮಾಡಿದ. ಅವನ ಪ್ರಯತ್ನವೆಲ್ಲ ವ್ಯರ್ಥವಾಗುತ್ತಿತ್ತು. ಯಾವ wire ಎಲ್ಲಿ ಸಿಕ್ಕಿಸಬೇಕೋ ಗೊತ್ತಾಗಲಿಲ್ಲ. ಅಷ್ಟು ಕತ್ತಲು. ಕೊನೆಗೆ mobile flash on ಮಾಡಿ ಗಾಡಿ ಓಡಿಸಬಹುದ ಅಂತ trial ನೋಡಿದ. flashನ ಬೆಳಕನ್ನೆಲ್ಲಾ ಅಮಾಸೆಯ ಕತ್ತಲು ನುಂಗಿಬಿಟ್ಟಿತು. ಅವನು ಇದ್ಧದ್ದು ಸಿರಾದಿಂದ ಮುಂದಕ್ಕೆ,ಸಿರಾದಲ್ಲಿದ್ದ ಗೆಳೆಯನೊಬ್ಬನಿಗೆ ಕರೆ ಮಾಡಿದರೆ help ಮಾಡಬಹುದೇನೋ ಅಂದುಕೊಂಡು dial ಮಾಡಿ ಕಿವಿ ಬಳಿ ಇಟ್ಟುಕೊಂಡ. ಆಕಡೆಯಿಂದ 3 beep ಕೇಳಿ call cut ಆಯ್ತು. ನೋಡಿದರೆ NO NETWORK. ಒಂದರ್ಧ ಗಂಟೆ ಆಯ್ತು. ಒಂದೇ ಒಂದು ಗಾಡಿ ಕೂಡ ಆ ಮಾರ್ಗದಲ್ಲಿ ಬರಲಿಲ್ಲ. 'ಅರೆ, nh4 ಇದು. at least ಲಾರಿ ಆದ್ರು ಬರದ್ ಬೇಡ್ವ ಅವನ**' ಅಂತ ಬೈದುಕೊಂಡು ದಾರಿಕಾಯುತ್ತ, networkಗಾಗಿ mobilಅನ್ನ ಮೇಲೆ ಕೆಳಗೆ ಹಿಂದೆ ಮುಂದೆ ತೂಗುತ್ತಾ, ಮಳೆಯಲ್ಲಿ ನೆನೆಯುತ್ತಿದ್ದ.

ದೂರದಲ್ಲೊಂದು ಬೆಳಕು ಕಾಣಿಸಿತು. ಒಂದಿದ್ದಿದ್ದು ಎರಡಾಯಿತು. ಹತ್ತಿರ ಬರುತ್ತಿರುವುದು ಖಾತ್ರಿಯಾಯ್ತು. ಅದು ಕಾರು. ರಾಮು bagನ್ನು ಹೆಗಲಿಗೆ ಹಾಕಿಕೊಂಡು dropಗೆ ಕೈ ಅಡಿಸುತ್ತಾ ನಿಂತ, ನಿಲ್ಲಿಸಬಹುದೇನೋ ಎಂಬ hopeಅಲ್ಲಿ. ಗಾಡಿ ಮುಂದಕ್ಕೇನೋ ಬರುತ್ತಿದೆ, ಆದರೆ ಆಗಿನಿಂದ ಇನ್ನೂ ಅಷ್ಟು ದೂರವಿದೆ‌!! ಅಲ್ಲಿಂದ ಇಲ್ಲಿಗೆ ನಡೆದುಕೊಂಡೆ 3 ನಿಮಿಷಕ್ಕೆ ಬರಬಹುದು, ಆದರೆ ಈ ಕಾರು ಹತ್ತು ನಿಮಿಷದಿಂದಲೂ ಬರುತ್ತಲೇ ಇದೆ. 'ಇನ್ನೆಷ್ಟು ನಿಧಾನವಿರಬಹುದಪ್ಪಾ ಆ ಡೈವರ್ರು' ಅಂದುಕೊಂಡ ರಾಮು ಕೈಯಾಡಿಸುವುದನ್ನೇನು ಬಿಡಲಿಲ್ಲ.ಕರೀ ಕಾರು ರಾಮುವಿನೆದುರು ನಿಂತಿತು. ರಾಮು ಕಣ್ ಕಣ್ಣು ಬಿಡುತ್ತಾ ಆ ಕಾರನ್ನು ನೋಡಿದ. ಅದು bmw! ರಾಮುಗೆ ಅದರಲ್ಲಿ ಹೋಗಬೇಕು ಎಂಬುದು ಜೀವಮಾನದ ಆಸೆ, ಅದು ಈ ರೀತಿ ಈಡೇರುವುದೆಂದು ಅವನು ಭಾವಿಸಿರಲಿಲ್ಲ. ಕಾರಿನ ಗಾಜು ಕೆಳಗಿಳಿಯಿತು. ರಾಮುವಿನ ಕಂಗಳು ಇನ್ನಷ್ಟು ಅರಳಿತು. ಕರಿ ಕಾರಿನ ಒಳಗೆ ಬಿಳಿ ಹುಡುಗಿ! ಮೊಣಕಾಲು ಮಟ್ಟದ sleaveless single piece ಹಾಕಿಕೊಂಡು ಗಾಡಿ ಓಡಿಸುತ್ತಾ ಕೂತಿದ್ದಾಳೆ. ರಾಮು ದಂಗಾಗಿದ್ದಾನೆ, ಆದರೆ ಅದನ್ನು ತೋರಿಸಿಕೊಳ್ಳಬಾರದ ಪ್ರಯತ್ನದಲ್ಲಿದ್ದಾನೆ. ಕೇಳಿದಳು ಚೆಲುವೆ 'any problem?' ರಾಮು ಆ ದನಿ ಕೇಳಿ ತನ್ನ fluent english ಮರತೇ ಹೋದ 'bike light switch off, flash not showing root. rain fall heavy. single. you drop' ಹುಡುಗಿ ಜೋರಾಗಿ ನಕ್ಕು ಗಾಡಿಯ ಬಾಗಿಲನ್ನು ಕೇವಲ button ಅದುಮಿಯೇ ತೆಗೆಯುತ್ತಾ 'ಎಲ್ಲಿಗ್ ಹೋಗ್ಬೇಕು?' ಅಂದಳು. 'to ಬೆಂಗ್ಳೂರ್' ಅಂದು ತೆಪ್ಪಗೆ ಕುಳಿತ ರಾಮು.

bmw... ಜೀವಮಾನದಲ್ಲಿ ರಾಮು ಆ ಗಾಡಿ ಹತ್ತುತ್ತೇನೆ ಎಂಬ ಕನಸು ಕಂಡಿರಲಿಲ್ಲ. ಕಾರನ್ನ ಮೇಲೆ ಕೆಳಗೆಲ್ಲ ಮಂಗನಂತೆ ಗಮನಿಸುತ್ತಿದ್ದ. ಮೆತ್ತಗಿನ seatಅನ್ನು ಮುಟ್ಟಿ ಮುಟ್ಟಿ ಆನಂದಿಸುತ್ತಿದ್ದ. ಅದರ ಅಂದವನ್ನೆಲ್ಲ ಕಣ್ತುಂಬಿಕೊಂಡ ಮೇಲೆ ಹುಡುಗಿಯ ಕಡೆ ಕಣ್ಣು ಹಾಯಿಸಿದ. ಪುರಾಣದಲ್ಲಿ ಅಪ್ಸರೆಯ ಕಲ್ಪನೆಯಿದೆಯಲ್ಲ, ನೀರಿನಷ್ಟು ಸುಕೋಮಲ ನಿರ್ಮಲ ದೇಹವುಳ್ಳವರು ಅಂತ, ಬಹುಶಃ ಅದು ನಿಜವಿರಬೇಕು. ಭೂಮಿಮೇಲೆಯೆ ಅಂಥವಳಿರುವಾಗ ಸ್ವರ್ಗದಲ್ಲೇಕೆ ಇಂಥ ಚೆಲುವೆಯರಿರಬಾರದು ಎಂದುಕೊಂಡ ರಾಮು. ಕಡುಗತ್ತಲಲ್ಲೂ ಅವಳ ಬಿಳುಪು ಪ್ರಕಾಶಮಾನವಾಗಿತ್ತು. ಆ ಕಾರ್ಮುಗಿಲಿಗಿಂತಲೂ ಅವಳ ನೀಳ ಕೇಶ ಕಪ್ಪಾಗಿತ್ತು. ಹೊಳೆತುವ ತುಟಿಗಳು, ಮೊಣಚು ಗಲ್ಲ, ತುಟಿಯಂಚನ್ನು ಆಗಾಗ ಸವರುವ ಕೆಂಪು ನಾಲಿಗೆ ಇನ್ನೂ ಏನೇನೋ ಅಂದ ನವ ನಿಧಿಯನ್ನು ರಾಮು ನೋಡಿ ಮೂಕಾದ. ಅವಳ ಅಂದದ ಆಸ್ವಾದದ ಗುಂಗಿನಿಂದ ಹೊರಬರಲು ಕಾರಿನ ಮುಂದೆ ನೋಡಿದ, ಎತ್ತಿನ ಗಾಡಿಯಂತೆ ಬಂದಿದ್ದ ಕಾರು ಬೆಂಕಿ ವೇಗದಲ್ಲಿ ಮುನ್ನುಗ್ಗುತಿದೆ!! 'ರೀ ನಿಧಾನ' ಅಂತಲೇ ರಾಮು ಅವರಿಬ್ಬರ ಮಧ್ಯದ ಮೌನ ಮುರಿದ. ಮಾತು ಕತೆ ಶುರಯವಾಯಿತು... ಕೇಳಿದಳು,'ಯಾಕೆ speed ಅಂದ್ರೆ ಅಷ್ಟು ಭಯಾನ?'
ಭಯಾನಾ? ಹಂಗಂದ್ರೆ?'
ಓಹ್ ನಿಮಗೆ ಭಯ ಅಂದ್ರೆನೆ ಗೊತ್ತಿಲ್ವಾ? smart'
ನಿಮ್ಮ ಹೆಸರು?'
ಹೇಳಿ ನೋಡೋಣ'
‘ how can i know your name?'
ಓಹ್ english ಬೇರೆ ಬರುತ್ತೆ. ಹ ಹ ಹ grammer ಕೂಡ ಗೊತ್ತಿದೆ, great'
ಅವಾಗ ನಿಮ್ಮನ್ನ ನಿಮ್ಮ bmwನ ನೋಡಿ ಹಾಗಾಯ್ತು. i know english well'
ಅಯ್ಯೋ ಆಯ್ತು ಬಿಡಿ. ಅದರಲ್ಲೇನಿದೆ ದೊಡ್ಡ ವಿಷಯ? ಅಮೇರಿಕದಲ್ಲಿ ಕಸ ಬಾಚೋನು english ಮಾತಾಡ್ತಾನೆ'
ನಮ್ಮಲ್ಲಿ english ಬರದವನು ಕಸ ಬಾಚ್ತಾನೆ' ಜೋರಾಗಿ ನಕ್ಕಳು ಬಾಲಿಕೆ. ರಾಮು ಆ ನಗುವನ್ನು ನೋಡುತ್ತಾ ಏನನ್ನೋ ಹುಡುವವನಂತೆ ಮಾಡಿದ. ಅವಳು ನಗುತ್ತಲೇ ಕೇಳಿದಳು 'ಏನು ಹುಡುಕ್ತಾ ಇದಿರಾ?'.ರಾಮು 'ಒಂದು ಬ್ಯಾಗ್ ಬೇಕು. ನೀವು ನಗುವಾಗ ಬೀಳೋ ಮುತ್ತು ರತ್ನ ವಜ್ರ ವೈಢೂರ್ಯ ಆರುಸ್ಕೋತೀನಿ. ಇದೇ job ಕೊಟ್ಬಿಡಿ ನನಗೆ' ಅಂದ. ನಗು ಇನ್ನೂ ಜೋರಾಯಿತು. ರಾಮು ಅವಳ ಅಂದವನ್ನೆಲ್ಲ ಕಣ್ಣಲ್ಲೇ.ಚಪ್ಪರಿಸುತ್ತಿದ್ದ. ಕೇಳಿದ 'ನಿಮ್ಮ ಹೆಸರೇಳಿ, ಏನಾಗುತ್ತೆ ನೋಡೋಣ. ಅವಳು 'ನೀವೆ ಹೇಳಿ ಏನಂತಿರೋ ಕೇಳಣ'.  
ರೂಪಸಿ'
ರೂಪಸಿ?! ಅಷ್ಟು ಹಳೆ ಹೆಸರೇಕೆ?'
ಅದು ಒಪ್ಪತ್ತೆ ನಿಮಗೆ. ಹಾಗಾಗಿ'
ಹೌದಾ...ಏನು ರೂಪಸಿ ಅರ್ಥ?'
ರೂಪ ಅಸಿ. ರೂಪ ಅಂದ್ರೆ ಅಂದ ಚಂದ ನಿನ್ನಂಥ ಮೈಮಾಟ. ಅಸಿ ಅಂದ್ರೆ ಕತ್ತಿ. totally ಅಂದ ಚಂದ ಮೈಮಾಟದ ಕತ್ತಿಯಿಂದ ನನ್ನಂಥವನ ಹೃದಯ ಇರಿವವಳು ಅಂತ'
ಓಹೋ.... ಇದು ಸ್ವಲ್ಪ ಜಾಸ್ತಿಯಾಯ್ತು'
ನನಿಗಂತು ಏನು ಹೊಗಳಿದರು ಕಡಿಮೆ ಅನ್ನುಸ್ತಿದೆ'
ನನ್ನದು ಬಿಡಿ, ನಿಮ್ಮ ಹೆಸರೇಳಿ'
ನೀವೆ guess ಮಾಡಿ'
ಇದು ಮೋಸ. ನನ್ನ task ನಂಗೆ ಕೊಡೋದು ಅನ್ಯಾಯ'
ಆಯ್ತು. ನಾನೇ ಹೇಳ್ತೇನೆ. ಅಭಿರಾಂ, ರಾಮು'
ನಾನು ಜಾನಕಿ, ಜಾನು'
ನಿಜ ಹೇಳು ಚೆಲವೆ'
ಅರ್ರೆ, promise baba, pouch ಅಲ್ಲಿ ನನ್ನ dl ಇದೆ ನೋಡ್ಕೋ'
ರಾಮು ಅದನ್ನೆಲ್ಲ ಮಾಡಲಿಲ್ಲ. ನಂಬಿದ. ಹೀಗೇ ಮಾತು ಕಥೆ ಮುಂದುವರೆಯಿತು.......

ಬ್ರಹ್ಮ ಸೃಷ್ಠಿ ಮಾಡುವಾಗ ಕೆಲವೊಂದಕ್ಕೆ ಸೌಂದರ್ಯ ಅನ್ನೋ materialmix ಮಾಡ್ತಾನೆ. ಅಂಥ itemಗಳು full popular ಆಗ್ತಾವೆ. ಒಮ್ಮೆ ಒಬ್ಬ ರಾಕ್ಷಸ ಆ ಸೌಂದರ್ಯವನ್ನ ಕದ್ದು ಚೆನ್ನಾಗಿರೋದೆಲ್ಲ ಅವನ ಮನೆಯಲ್ಲೇ ಇರಬೇಕು, ಬೇರೆಲ್ಲೂ ಚೆಲುವು ಅನ್ನೋದು ಇರಲೇ ಬಾರದು ಅಂತ decide ಮಾಡಿ ಆ ಸೌಂದರ್ಯದ boxನ ಕದ್ದ. ಆಗ ಬ್ರಹ್ಮ, ಅವನ ತಂದೆ ಹತ್ತಿರ ಹೋಗಿ, 'ಅಪ್ಪಾ, ನಾನು ಈ ಥರ ನೀನು ಕೊಟ್ಟಿದ್ದ ಸೌಂದರ್ಯದ boxನ ಕಳ್ಕೊಂಡಿದಿನಿ. ಆ ರಾಕ್ಷಸ ಅದುನ್ನ ಕದ್ದಿದನೆ. ಅದು ಇಲ್ಲದೆ ಅಂದವನ್ನ ಸೃಷ್ಟಿಸಲಿಕ್ಕೆ ಸಾಧ್ಯವೇ ಇಲ್ಲ, please ಏನಾದರೂ ಮಾಡಿ ತಂದುಕೊಡು' ಅಂತ ಕೇಳಿಕೊಂಡ. ಆಗ ಬ್ರಹ್ಮನ father ವಿಷ್ಣು, ಆ ರಾಕ್ಷಸನ ಜೊತೆ ಹೊರಾಡಿ ಆ boxನ ತಂದ. ಹಾಗೆ ತರುವಾಗ ಭೂಮಿ ಮೇಲೆ ಒಂದೆರಡು ಹನಿ ಬಿತ್ತು. ಇವತ್ತಿಗೂ ಭೂಮಿಲಿ ಅದಿಕ್ಕಿಂತ ಸೌಂದರ್ಯ ಎಲ್ಲೂ ಇಲ್ಲ. ಅದು ಯಾವುದು ಗೊತ್ತಾ?' ರಾಮು ಕೇಳಿದ. ಜಾನು ಮುಂಗುರಳನ್ನು ಕಿವಿ ಹಿಂದೆ ತಳ್ಳಿ 'ಗೊತ್ತಿಲ್ಲ. ಎಲ್ಲಿದೆ?' ಅಂದಳು.
'ಇಗೋ ನನ್ನ ಪಕ್ಕದಲ್ಲಿ' ಅಂತ ಜಾನು ಕಡೆ ಬೆರಳು ಮಾಡಿದ. ಜಾನಕಿ ನಾಚಿ 'ಸಾಕು ಸಾಕು' ಎನ್ನುತ್ತ ಆ ತುಂಟು ಬೆರೆಳಿಗೊಂದು ಏಟು ಹಾಕಿದಳು. ಅವಳ ಸುಕೋಮಲ ಕೈಯ ಸ್ಪರ್ಷದಲ್ಲಿ ಸುಳಿಮಿಂಚು ವಿದ್ಯುತ್ ಹರಿಸಿದ ಅನುಭೂತಿಯಾಯ್ತು ರಾಮುವಿಗೆ. ಆ ಸ್ಪರ್ಷದ ಆನಂದ ಸವಿಯುತ್ತ ಕೆಲ ಹೊತ್ತು, ತುಟಿಯಂಚಲಿ ನಗೆ ಹೊತ್ತು ಹನಿ ಜಿನುಗುತ್ತಿದ್ದ ಆಗಸದೆಡೆ ನೋಡುತ್ತ ಅಲ್ಲಿ ಯಾರೋ ಬರಿದದ್ದನ್ನು ಓದುವವನಂತೆ ಗುನುಗಿದ 'ಪ್ಯಾರ್ ಹುವ ಇಕರಾರ್ ಹುವಾ ಹೈ, ಪ್ಯಾರ್ ಸೆ ಫಿರ್ ಕ್ಯೂ ಡರ್ತಾ ಹೈ ದಿಲ್....' ಜಾನು ಮುಂದುವರೆಸಿದಳು 'ಕಹ್ತ ಹೈ ದಿಲ್, ರಸ್ತಾ ಮುಶ್ಕಿಲ್ ಮಾಲೂಮ್ ನಹಿ ಹೈ ಕಹಾ ಮನ್ಝಿಲ್' ಇಬ್ಬರೂ ಕೂಡಿ ಹೇಳಿದರು. 'ಪ್ಯಾರ್ ಹುವಾ ಹೈ....'

ರಾಮು ಕೇಳಿದ 'ಜಾನು, ಈ ಕಡೆ ಎಲ್ಲಿಂದ ಬರ್ತಾ ಇದಿಯಾ?' ಜಾನು ಮುಖದಲ್ಲಿ ಈವರೆಗೂ ಇದ್ದ ನಗು ಸ್ವಲ್ಪ ಮಾಯವಾದಂತೆ ತೋಚಿತು. ರಾಮು ಕೇಳಬಾರದ್ದನ್ನೇನಾದರೂ ಕೇಳಿದೆನಾ ಎಂದುಕೊಂಡ ತನ್ನ ಪ್ರಶ್ನೆಯನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡ, ಸರಿಯಾಗಿಯೇ ಇತ್ತು. ಜಾನು ಸ್ವಲ್ಪ ಹೊತ್ತು pause ನೀಡಿ ಬಳಿಕ 'ಚಿತ್ರ ದುರ್ಗದಿಂದ'. ರಾಮುಗೆ ಖುಷಿ, ಅವನು ಹೇಳಿದ 'ಓಹ್ ನಮ್ಮೂರು. ಅಲ್ಲೇನು relations ಇದಾರಾ?' ಅಂತ. 'ಇಲ್ಲ. ಇದ್ದ ಒಂದು ಸಂಬಂಧ ಕೂಡ ಕಡೆದು ಹೋಯ್ತು. ಮದುವೆ ಮನೇಲಿ ಭಾವಿ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ಬರ್ತಿದೀನಿ' ಅಂದಳು ಜಾನಕಿ. ದನಿ ಸ್ವಲ್ಪ ಗದ್ಗದವಾಗಿತ್ತು. 'ಯಾಕೆ ಜಾನು? ಏನಾದರು ಸಮಸ್ಯೆ ಆಗಿದ್ಯಾ? ಏನು ಅಂತ ಕೇಳಬಹುದ?' ಅಂದ ರಾಮು. 'ಕೇಳು' ಅಂದಳು ಜಾನು. ರಾಮು 'ಹೇಳು' ಎಂದು ಕೇಳಿದ. ಜಾನಕಿ ಕಾರನ್ನು ರಸ್ತೆ ಪಕ್ಕದಲ್ಲಿ indicator on ಮಾಡಿ ನಿಲ್ಲಿಸಿ ಕೆಳಗಿಳಿದಳು. ಈ ಕಡೆಯಿಂದ ರಾಮು ಇಳಿದ. ಜಾನಕಿ ಕಣ್ಣಲ್ಲಿ ನೀರು ತುಂಬಿತ್ತು ಆದರೂ ಅದನ್ನು ತಡೆಹಿಡಿದು ಹೇಳಿದಳು,

'... ನಾನು ಒಬ್ಬಳೆ ಮಗಳು, ನಮ್ಮಪ್ಪ ಅಮ್ಮನಿಗೆ ನಾನೇ ಜಗತ್ತು. ತುಂಬಾ ಮುದ್ದಿನಿಂದ ಬೆಳಸಿದ್ರು. ಹುಟ್ಟಿನಿಂದಲೂ ಹಣಕ್ಕೇನು ಕೊರತೆಯಿಲ್ಲ. ರಾಣಿ ಥರ ಇದ್ದೆ. ಕೆಲವು ತಿಂಗಳ ಹಿಂದೆ, ಅದೇ ಮದುವೆ ಅಂದ್ನಲ, ಆ ಮದುವೆ ಹುಡುಗ ನಮ್ಮ ಮನೆಗೆ ಬಂದು ನನ್ನ ಮದುವೆ ಮಾಡೋದಕ್ಕೆ ಒಪ್ಪಿಕೊಂಡಿದ್ದ. ಅವನ ಮನೆಯವರೂ ಸಹ. engagement ಆಗಿತ್ತು. ಎಲ್ಲರಿಗೂ ವಿಷಯ ಗೊತ್ತಾಗಿತ್ತು. ಆದರೆ ಇದ್ದಕ್ಕಿದ್ದಂತೆ ನಿನ್ನ ಜಾತಕ ಸರಿಯಿಲ್ಲ. ಹಾಗೆ ಹೀಗೆ ಅಂತ ಕುಂಟು ನೆಪ ಹೇಳಿ ಮದುವೆ cancel ಮಾಡಿದ್ರು. ಇವತ್ತು ಬೇರೆ ಹೆಣ್ಣಿನ ಜೊತೆ ಅವನ ಮದುವೆ. ಅಪ್ಪಾಜಿ ಬಲವಂತ ಮಾಡಿ ಇಲ್ಲಿಗೆ ಕಳೆಸಿದ್ರು, ಅವನು ಕೊಟ್ಟಿದ್ದ ಉಂಗುರ, watch ಎಲ್ಲಾ return ಮಾಡೋಕೆ. ಅವನು ಹೋದ ಅಂತ ನನಗೇನು ಬೇಜಾರಿಲ್ಲ. ಬದಲಾಗಿ ಬಾಗಲಿಗೆ ಬಂದ ಪೀಡೆ ಬೆನ್ನು ಹತ್ತಿಲ್ವಲ್ಲಾ ಅನ್ನೋ ನೆಮ್ಮದಿಯಿದೆ. ಆದರೆ ಅಪ್ಪ ಅಮ್ಮನನ್ನ ನೆನಸ್ಕೊಂಡ್ರೆ ಹಿಂಸೆ ಆಗುತ್ತೆ...' ಅನ್ನುತ್ತಾ ಕಣ್ಣೀರು ಚೆಲ್ಲುತ್ತಿದ್ದ ಜಾನಕಿಯ ಪಕ್ಕ ನಿಂತು, ಹೆಗಲ ಮೇಲೆ ಕೈ ಹಾಕಿ 'ಹೇ ಜಾನು, ಏನಿದು? ಆ ತಿರುಬೋಕಿ ಯಾರೋ ಮೋಸ ಮಾಡಿದನೆ ಅಂತ ನೀನ್ ಅಳೋದೆ, ಛೆ. ಸುಮ್ಮನಿರು' ಎಂದು ಸಮಾದಾನ ಮಾಡುತ್ತಿದ್ದ.

ಮೂಗಿನಿಂದ ಸಿರ್ರೆಂದು ಸಿಂಬಳ ಎಳೆದುಕೊಂಡ ಜಾನು 'back seat ಅಲ್ಲಿ ಸಣ್ಣ ಬ್ಯಾಗ್ ಇದೆ, ತರ್ತೀಯ please..?ಎಂದಳು. ಅವಳ ಮಾತು ಮುಗಿಯುವುದರಲ್ಲಿ ರಾಮು ಓಡೋಡಿ ಹೋಗಿ ಆ bag ತಂದ. ಜಾನು ಅದರೊಳಗಿಂದ imported wine ತೆಗೆದಳು. ರಾಮು ಗಾಬರಿಯಾಗಿ ಹೋದ, ಮೂರ್ಛೆ ಬೀಳುವುದೇ ಬಾಕಿ. 'ಬೇಕ ರಾಂ? swissದು, ತುಂಬಾ ಚೆನಾಗಿರುತ್ತೆ. wanna try' ಅಂದಳು. ಹುಡುಗಿಯ ಮುಂದೆ ಮಾನ ಹೋಗಬಾರದಲ್ಲ. ರಾಮು ಕೂಡ ಅವಳ ಜೊತೆಯಾಗಲು ಅಣಿಯಾದ. ಜಾನು ಏನೋ ಹೊಳೆದವಳಂತೆ ಹೋಗಿ ಎರಡು glass ತಂದಳು, ರಾಮುವಿಗೊಂದು ತನಗೊಂದು. ಎರಡಕ್ಕೂ ಸಮವಾಗಿ wine ಸುರಿದಳು. cheers ಎನ್ನುತ್ತ ಇಬ್ಬರೂ ಲೋಟಗಳ ತುದಿ ತಾಕಿಸಿದರು. ಜಾನು ಒಮ್ಮೆಗೇ ಅಷ್ಟನ್ನೂ ಕುಡಿದಳು, ರಾಮು ಅವಳನ್ನೇ ನೋಡುತ್ತಿದ್ದ. ಅವನ ನೋಟ ನೋಡಿದ ಜಾನು 'ರಾಮು, ಹುಡುಗಿ ಕೈ ಕೊಟ್ರೆ ನೀವು ಗಡ್ಡ ಬಿಡ್ಬೋದು, cigarette ಸೇದಬಹುದು ನಾವು at least wine ತಗೋಬಾರ್ದ? ಹಾಗ್ ಯಾಕ್ ನೋಡ್ತಿದ್ದೀಯ?' ಅಂದಳು. ರಾಮು ಸಾವರಿಸಿಕೊಂಡು ಹೇಳಿದ 'ಏನಿಲ್ಲ, wine glassನ ಹೀಗ್ ಇಟ್ಕೊಂಡಿದ್ರೆ ನಿನ್ನ ಆ ನಡುವನ್ನೇ ಹಿಡಿದುಕೊಂಡಿದಿನೇನೋ ಅನ್ನುಸ್ತಿದೆ. ನೋಡು ಬೇಕಿದ್ರೆ, same size' ಅಂದ. ಜಾನು ಕಣ್ಣೊರೆಸಿಕೊಂಡು ನಕ್ಕಳು. ರಾಮುವಿಗೆ ಅಳಾರವಾಯಿತು.

ಇಬ್ಬರೂ ಕಾರಿನ bannet ಮೇಲೆ ಕೂತು wineಅನ್ನು ವೈನಾಗಿ ಹೀರುತ್ತಾ ಮಾತಿನಲ್ಲಿ ಮೈಮರೆತರು, ಗತವನ್ನೂ ಮರೆತರು. ಜನುಮಾಂತರದ ಗೆಳಯರಾದರು. ಊರಿಗೆ ಹೋಗಬೇಕೆಂಬ ತಿಳುವಳಿಕೆ ಬರುವ ವೇಳೆಗೆ ರಾಮು ಕಾರಿನ ಚಕ್ರಕ್ಕೆ ಆನಿಕೊಂಡು ಮಲಗಿದ್ದ, ಜಾನು ಅವನ ಎದೆ ಮೇಲೆ ಮಲಗಿದ್ದಳು!!! ಮುಗೀತು. ಇನ್ನು ಅವರಿಬ್ಬರ ಮಧ್ಯೆ ಯಾವ ಮುಚ್ಚು ಮರೆಯೂ ಇರಲಿಲ್ಲ. ಮತ್ತೆ ಪ್ರಯಾಣ ಶುರುವಾಯಿತು. ಎಗ್ಗಿಲ್ಲದೆ ಮಾತು ಕತೆ ಸಾಗಿತು. ಬಾಲ್ಯದ ತುಂಟತನ, ಯೌವನದ ಹುಡುಗುತನ, ಮನದ ಮಂಥನ ಎಲ್ಲವೂ ಅವರ ಸಂಭಾಷಣೆಯಲ್ಲಿ ಇಣುಕಿ ಹೋದವು. ಕೆಲವು ಸತ್ಯ, ಕೆಲವು ಸುಳ್ಳು ಎಲ್ಲವೂ ಆ ಸಂವಹನದಲ್ಲಿ ಸೇರಿದ್ದವು. ಭುಜಗಳು ಅಂಟುಕೊಂಡಿದ್ದವು.

'ಥೂ ಕರ್ಮ, ಬೆಂಗಳೂರು ಬಂದೇ ಬಿಟ್ಟಿತು' ಶಪಿಸಿದ ರಾಮು. ನಕ್ಕಳು ಜಾನು. 'ನೀನು ಯಾವ ಕಡೆ ಹೋಗೋದು?' ರಾಮು ಜಾನಕಿಯನ್ನು ಕೇಳಿದ. 'ಚಮರಾಜಪೇಟೆ. ನೀನು?' ವಿಚಾರಿಸಿದಳು ಜಾನು. 'ಇಲ್ಲೇ ಯಶವಂತಪುರ. ನನ್ನನ್ನ ಮನೆಗೆ ಬಿಟ್ಟು ಹೋಗುತ್ತೀಯಾ? if you dont mind' ಅಂದ ರಾಮು. 'mind ಕೆಡಿಸಿಕೊಳ್ಳೋದಾಗಿದ್ದರೆ ಕಾರಲ್ಲೇ ಕೂಡಿಸಿಕೊಳ್ತಿರಲಿಲ್ಲ' ಅವಾಝ್ ಹಾಕಿದಳು. 'ಆಯ್ತೆ ಚೆಲುವೆ, ಮನೆಗೆ ಬಿಡು ನನ್ನ' ಅಂದು ಸುಮ್ಮನೆ ಕುಳಿತ. ಮಾತು ಸ್ವಲ್ಪ ಕಡಿಮೆಯಾಗುತ್ತಾ ಬಂತು. ಯಾಕೆಂದರೆ ಇಂಥ ಮೋಹಕವಾದ ಯಾನ ಕೊನೆಗೊಳ್ಳುತ್ತದಲ್ಲಾ ಎಂಬ ಬೇಸರದಲ್ಲಿ. ರಾಮು ತನ್ನ ಮನೆ ದಾರಿಯನ್ನ ತೋರಿಸುತ್ತಿದ್ದ. ಅಂತೂ ಮನೆ ಬಂತು. ದೊಡ್ಡ ಮನೆಯೆ. ಎರಡಂತಸ್ತಿನದು. ಒಳಗೆ ಹೋಗಲು ರಾಮುಗೆ ಮನಸ್ಸಿಲ್ಲ. ಕಾರು ಹತ್ತುವಾಗ ಹೂವಿನಷ್ಟು ಹಗುರವಿದ್ದ ಬ್ಯಾಗು ಈಗ ಹೆಣಭಾರವಾದಂತಿದೆ. ಜಾನು ಮುಖ ಬಾಡಿ ಹೋಗಿದೆ. ಕಷ್ಟ ಪಟ್ಟು ಕೆಳಗಿಳಿದ ರಾಮು 'ಹ್ಮ್... ಬರ್ಲಾ...?' ಅಂದ
ಬಾ...'
ಹೋಗಿ ಬರ್ಲಾ ಅಂದೆ...'
ಹೋಗ್ಬೇಡ... ಬಾ ಅಂದೆ'
ಈಗ ಬೇಡ, ಸಿಗೋಣ ಮತ್ತೆ'
ಯಾವಾಗ?'
ಆದಷ್ಟು ಬೇಗ'
ಅದೇ, ಎಷ್ಟು ಬೇಗ?'
ನಾಳೆ? yeah ನಾಳೆನೆ. rock resortಗೆ ಹೋಗೋಣ. ಅಲ್ಲಿ ಎಲ್ಲಾ ಥರ enjoy ಮಾಡಬಹುದು'
ಎಲ್ಲಾ ಥರ ಅಂದ್ರೆ....?'
ಎಲ್ಲಾ ಥರ ಅಂದ್ರೆ..ಅದೇ ನಿನ್ನ ಮನಸ್ಸಲ್ಲಿ ಈಗ ಯಾವ ಯಾವ ಥರನೋ ಬಂತಲ್ಲ ಹಾಗೆ'
ನಗುತ್ತಾ-ನಾಚುತ್ತಾ 'ಅಲ್ಲಿ ತನಕ ಏನೂ ಕೊಡಲ್ವಾ....?' ಅಂದಳು.
ರಾಮುಗೆ ಒಳಗೊಳಗೇ ಖುಷಿ. 'ನನಗೂ ಕೊಡೊ ಆಸೆ, ಆದರೆ ಭಯ'
ನನಗೂ ಪಡೆದುಕೊಳ್ಳೋ ಆಸೆ, ಭಯವೇನಿಲ್ಲ'
ರಾಮುಗೆ ಧೈರ್ಯ ಎಲ್ಲಿಂದ ಎದ್ದು ಬಂತೋ ಏನೋ, ನೇರವಾಗಿ ಅವಳು ಕೂತಿದ್ದ ಕಡೆ ಹೋಗಿ ಅವಳ ಕಣ್ಣಲ್ಲಿ ಕಣ್ಣಿಟ್ಟು ಕೇಳಿದ 'ನನಗೆ ಕೊಡೋದಕ್ಕಿಂತ ಪಡೆಯೋದೆ ಇಷ್ಟ. ನೀನು ಕೊಟ್ಟರೂ ನಾನು ಕೊಟ್ಟರೂ ಅದೇನು ಬೇರೆ ಅಲ್ಲ. ನೀನೆ ಕೊಡು' ಅಂದ. ನಾಚುತ್ತಾ ಹುಡುಗಿ ಹೇಳಿದಳು 'ಸರಿ, ಕಣ್ಮುಚ್ಚು. ನನಗೆ ನಾಚಿಕೆಯಾಗುತ್ತೆ' ಅಂದಳು. ಕಣ್ಮುಚ್ಚಿದ ರಾಮು ಸಿಹಿಮುತ್ತಿನ ಮುತ್ತಿಗೆಗಾಗಿ ತುಟಿಯರಳಿಸಿ ನಿಂತ. ಕ್ಷಣಗಳುರುಳಿದವು ಯಾವ ಅನುಭವವೂ ಆಗಲಿಲ್ಲ. ತುಟಿಯನ್ನು ಸ್ವಲ್ಪ ಮುಂದೆ ತಳ್ಳಿದ, ಯಾವ ತುಟಿಯೂ ತಾಕಲಿಲ್ಲ. ಕಣ್ಣು ಬಿಟ್ಟು ನೋಡಿದರೆ ಮುಂದೆ ಕಾರು ಇಲ್ಲ, ಹುಡುಗಿಯೂ ಇಲ್ಲ, ಅವನ ಮನೆಯೂ ಇಲ್ಲ! ಅವನ cbz ಎಲ್ಲಿ ಕೆಟ್ಟು ನಿಂತಿತ್ತೋ ಅಲ್ಲೇ ಇದ್ದಾನೆ!! ಎಲ್ಲವೂ ಕನಸು, ಆ ಹುಡುಗಿ... ಥೋ ಅವಳೂ ಕನಸು. 'ಏನ್ ಸುಡುಗಾಡು ಕನಸೋ ಅವನ**' ಎಂದುಕೊಂಡು ಕತ್ತಲೆಯನ್ನೂ ಆ ಕನಸನ್ನೂ ಬಾಯಿತುಂಬ ಬೈದುಕೊಳ್ಳುತ್ತಾ ಮುಂಜಾನೆಗಾಗಿ ಕಾದ...

 ಬೆಳಕು ಹರಿಯಿತು. ದಾರಿ ಕಂಡಿತು. ಗಾಡಿ ತೆಗೆದ ರಾಮು ಎಲ್ಲಿಯೂ ನಿಲ್ಲಿಸದೇ ಮನೆಗೆ ಬಂದ. ಬಾಗಿಲು ತಟ್ಟಿದ. ಇನ್ನೂ 5 ವರೆ. ಯಾರೂ ಎದ್ದಿರಲಿಲ್ಲವೇನೋ, ಬಾಗಿಲನ್ನು ತುಸು ತಡವಾಗಿ ತೆಗೆದರು. ರಾಮು frustrate ಆದವನಂತೆ ಮನೆಯೊಳಗೆ ಹೋಗಿ sofa ಮೇಲೆ ಮಲಗಿದ. ಅಮ್ಮ ಕೇಳಿದಳು 'ಟೀ ಬೇಕಾ?'. 'ಹ್ಮ್....' ಅಂದ ಗಡುಸಾಗಿ. tv on ಮಾಡಿದ. m.tv ಬರುತ್ತಿತ್ತು. ರಾತ್ರಿ ಹಾಡಿದ ಹಾಡು 'ಪ್ಯಾರ್ ಹುವಾ...' ಬರುತ್ತಿತ್ತು. ' ಇದು ಬೇಕಿತ್ತಾ...' ಅಂದುಕೊಂಡ ರಾಮು channel change ಮಾಡುತ್ತಾ tea ಬರುವ ವರೆಗೆ time pass ಮಾಡುವವನಿದ್ದ. ಕನ್ನಡ news channelಗೆ ಬರುವ ವೇಳೆಗೆ tea ಬಂತು. tea ಹೀರುತ್ತಿದ್ದ ರಾಮುವಿಗೆ ಕೇಳಿಸಿತು 'ನಿನ್ನೆ ರಾತ್ರಿಯ ಭೀಕರ ರಸ್ತೆ ಅಪಘಾತದಲ್ಲಿ bmw ಕಾರಲ್ಲಿ ಕುಡಿದು ಬರುತ್ತಿದ್ದ ಜಾನಕಿಯೆಂಬ ಹುಡುಗಿ ಸಾವನ್ನಪ್ಪಿದ್ದಾಳೆ' ನಿಟ್ಟುಬಿದ್ದ ರಾಮು ಮೈ ಮೇಲೆ tea ಚಲ್ಲಿತು, cup ಕೆಳಗೆ ಬಿದ್ದು ಒಡೆಯಿತು. tv ಕಡೆ ನೋಡಿದರೆ ರಾತ್ರಿ ತಾನು ನೋಡಿದ ಚೆಲುವೆಯೇ ಇಲ್ಲಿ ಹೆಣವಾಗಿದ್ದಾಳೆ!!!

ರಾಮು ತನ್ನಲ್ಲೇ ತನಗೆ ಹೇಳಿಕೊಂಡ ' ಹಾಗಾದರೆ ರಾತ್ರಿ ನಾನು ನೋಡಿದ್ದು ಕನಸಾ..??!!'. ಪಕ್ಕದಿಂದ ಕೇಳಿಸಿತು, 'ಅಲ್ಲ ರಾಮು... ರಾತ್ರಿ ನಡೆದದ್ದೆಲ್ಲಾ ನಿಜ'. ಹೇಳಿದಳು ಜಾನು.

ನಾದೀ


ಊರ್ಮಿಳೆಯ ತಪಸ್ಸು!

ಊರ್ಮಿಳೆಯ ತಪಸ್ಸು..! ‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ...