ಆದಿ ದಂಪತಿಗಳಾ ಬದುಕೆ
ಆದರ್ಶ ಅವನಿದಂಪತಿಗೆ,
ಜನುಮಜನುಮಾಂತರದವರ
ಅನುಬಂಧ ಆನಂದ ಮಾರ್ಗ ನಮಗೆ,
ಮಡದಿಯೊಡನೆ ಭವಸಾಗರ ಯಾನ,
ಭರತಭುವಿಯ ಋಷಿವನ ಜೀವನ,
ಸ್ಪೂರ್ತಿ ಸಿಂಧು ಕೊನೆವರೆಗೆ...
ಪರಶಿವನನೊಂದು ಕಡೆ,
ಪಾರ್ವತಿಯನೊಂದು ಕಡೆ,
ಬಿಡಿಬಿಡಿಯಾಗಿ ಹುಡುಕಾಡಿದೆ.
ವೇದ-ನಾದದ ಹಾಗೆ
ಮಾತು-ಅರ್ಥದ ಹಾಗೆ
ಕೈಗೆ ದೊರಕಿದರೊಂದೆ ದೇಹದೊಳಗೆ.
ಕೈಲಾಸದಂಚಿನಲಿ,
ಹಿಮರಾಜಿ ಮಂಚದಲಿ,
ಮೇಘವೇ ಮೆದುಗಾಳಿ ಬೀಸುವಾಗ,
ಹರನ ಪದತಲದಲ್ಲಿ,
ತನುಸೇವೆ ಮಾಡುತಲಿ,
ಗೌರಾಂಗಿ ಪ್ರಶ್ನೆಗಳ ಕೇಳುವಾಗ,
ಶಿವ ಕೊಟ್ಟ ಉತ್ತರವೆ ನವ ಪುರಾಣ,
ಇಂದಿಗೂ ವೇದಗಳಿಗವೆ ಪ್ರಮಾಣ.
ಅವರ ಸರಸವಿದೆ-ಲೋಕ ಕಲ್ಯಾಣ....
ಬೇಡಿದೊಡೆ ವರಕರುಣಿಸುವನು ಕಾಪಾಲಿ,
ಬೇಡಿದಾಟವನಾಡೆ ಮಣಿಸುವಳು ಕಾಳಿ.
ಅರೆನಗ್ನನಾಗಲೆವ ಮಸಣದಲಿ ಬೋಳಾ ಶಂಕರ,
ಅನ್ನಪೂರ್ಣೆ ಭುವನಕಿದಳು
ಶಿವನಿಗೋಸ್ಕರ.
ಹಿಡಿದರೆಟುಕನು ಕೈಗೆ,
ಸಿಲುಕನಾಗಿಹ ಮಾಯೆಗೆ,
ಬಲು ಬೇಗ ಸಿಡುಕುವನು,
ಮದನಾರಿ ಶಶಿ ಶೇಖರ.
ಮಮತೆ ಸುಧೆಯನು ಸುರಿಸಿ,
ಮಕ್ಕಳೊಟ್ಟಗೆ ಬೆರೆಸಿ,
ಪೂರ್ವಾಪರ ಕಾಯುವಳು
ಮೊದ ನಾರಿ ಉಮೆ....
ಮೊದಲ ದಂಪತಿಗಳವರೆ,
ಬೆಳಕೆಮ್ಮ ಪಾಲಿಗೆ.
ಸತಿ ಪತಿಯ ಸುಖಸಾರ
ಸಂಸಾರ-ಸಮಭಾರ
ಎಂಬ ಸೂತ್ರವ ತೋರಿಹರು
ನಮ್ಮ ಬಾಳಿಗೆ,
ಅನಂತ ನಮನವಿದೋ
ಆದಿ ದಂಪತಿಗಳಿಗೆ..
ನಾದೀ....
No comments:
Post a Comment