Friday, 12 May 2017

ಅಲ್ಲಿ ದೇವರಿರಲಿಲ್ಲ..!

ಅಲ್ಲಿ ದೇವರಿರಲಿಲ್ಲ..!

ಅದು ಆ ಊರಿನ ಕೊನೆಯ ಬೀದಿಯ ಕಡೆಯ ಮನೆ. ಅಲ್ಲಿಗೆ ಹೋದವನು ಪತಿತ. ಮರ್ಯಾದಸ್ಥರ ಪಾಲಿಗೆ, ಆ ಮನೆಯ ಕಡೆ ತಲೆ ಇಟ್ಟು ಮಲಗೋದು ಸಹ ನಿಶಿದ್ಧ. ಆ ಮನೆಯಲ್ಲಿದ್ದವಳು, ಬೆಳ್ಳಿ.

ಇಂಥಾ ಮನೆಯಿದ್ದ ಊರಿನಲ್ಲೇ ಶ್ರೀರಾಮನ ದೇವಾಲಯವಿತ್ತು. ಅಲ್ಲಿ ತಲೆಮಾರುಗಳಿಂದಲೂ ಐನೋರ ವಂಶಸ್ಥರೇ ಪೂಜೆ ಮಾಡಿಕೊಂಡು ಬಂದಿದ್ದರು. ರಾಮಯ್ಯನೋರು ಹೇಳೋ ಪ್ರಕಾರ, ಅವರಜ್ಜನ ಕಾಲದಲ್ಲಿ ಇಲ್ಲಿಗೆ ಸಪ್ತರ್ಷಿಗಳು ಬಂದು ರಾಮನ ಪೂಜೆ ಮಾಡ್ತಿದ್ರಂತೆ. ಅವರಜ್ಜನ ಕಾಲದಲ್ಲೂ ಈ ಮಾತು ಅಂತಕಂತೆಯಾಗಿಯೇ ಇತ್ತು! ಅವತ್ತು ಸಪ್ತರ್ಷಿಗಳು ಬಂದಿದ್ದರೋ, ಇಲ್ಲವೋ ಗೊತ್ತಿಲ್ಲ. ಆದರೆ ಈಗ, ಹಾಗಂದುಕೊಂಡು ಹತ್ತಾರು ಊರುಗಳಿಂದ ಭಕ್ತರು ಬರುತ್ತಿದ್ದರು.
   
ರಾಮಯ್ಯನೋರು ತುಂಬಾ ಸಭ್ಯಸ್ಥರು. ಊರಲ್ಲಿ ಯಾರ ಮನೆಯಯಲ್ಲಾದರು ಪುರುಡಾದರೆ, ರಾಮಯ್ಯನೋರ ಮಾರ್ಗದರ್ಶನದಲ್ಲೇ ಮನೆಮಂದಿ ನಡಿಬೇಕು. ಯಾರಾದರೂ ನೆಗದುಬಿದ್ದರೆ, ಅವರ ಪಿತೃಗಳಿಗೆ ಪಿಂಡ ಇಡೋದಕ್ಕೂ ರಾಮಯ್ಯನೋರೆ ಬೇಕು. ಕೆಲವು ಸಲ, ಮದುವೆ ಮಂಟಪದಲ್ಲಿ ಗಟ್ಟಿಮೇಳದ ಸದ್ದು ನಿಲ್ಲುತ್ತಿದ್ದ ಹಾಗೇ, ಸ್ಮಶಾನದಲ್ಲಿ ಕಾಯುತ್ತಿದ್ದ ಹೆಣಕ್ಕೆ ಮುಕ್ತಿ ಕಾಣಿಸಬೇಕಿತ್ತು.  ಒಟ್ಟಾರೆ ರಾಮಯ್ಯನೋರದ್ದು ಅವಿಶ್ರಾಂತ ಬದುಕು. ಇಂಥಾ ಕಾರ್ಯದೊತ್ತಡದ ಮಧ್ಯಯೇ ಸುರೇಶ, ಮಹೇಶ, ವಿಜಯ, ಗಿರೀಶ ಅನ್ನೋ ಮೂರು ಗಂಡು ಒಂದು ಹೆಣ್ಣಿಗೆ ಜನ್ಮ ನೀಡಿದ್ದರು. ತಲೆತುಂಬಾ ಹುಡುಕಿದರೂ ಕರಿಗೂದಲು ಕಾಣದ ರಾಮಯ್ಯನೋರಿಗೆ ಈಗ ವಯಸ್ಸು ಐವತ್ತೋ ಐವತ್ತೈದೋ ಅಷ್ಟೆ. ಇಷ್ಟು ವರ್ಷದಲ್ಲಿ ಸತ್ಯವನ್ನಲ್ಲದೆ ಮತ್ತೇನನ್ನೂ ಹೇಳಿರಲಿಲ್ಲವಂತೆ ರಾಮಯ್ಯನೋರು. ಈ ಮಾತನ್ನು ಖುದ್ದು ದೇವಾಲಯದ ಖಚಾಂಜಿಯೇ ಹೇಳಿದ್ದರು.
   
ಹೀಗೆ, ದಿನನಿತ್ಯದ ಪರಿಪಾಠದ ಹಾಗೆ, ಅವತ್ತೂ ಕೂಡ ಊರಿನ ಪ್ರಮುಖರೆಲ್ಲಾ ರಾಮಮಂದಿರದ ಜಗುಲಿಯಲ್ಲಿ ಕೂತು, ಆಗಷ್ಟೇ ಪ್ರಚಾರ ಪಡೀತಿದ್ದ ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಮಾತಾಡುತ್ತಿದ್ದರು.
“ಅಲ್ಲಪ, ಇನ್ಮುಂದೆ ಎಲ್ಡೇ ಮಕ್ಳು ಅಮ್ತಲ್ಲಪ ಎಲ್ಲಾರ್ಗುವೆ? ಜಾಸ್ತಿ ಆದ್ರೆ ಏನ್ ಮಾಡ್ತರೆ?”
“ಇನ್ಯಾತ್ ಮಾಡ್ತಾರೆ? ಅಮ್ಮಮ್ಮಾ ಅಂದ್ರೆ ಜುಲ್ಮಾನೆ ಆಕ್ಬೋದು ನೋಡು”
“ಅಲ್ಲ, ಇದ್ದುಕ್ಕಿದ್ದಂಗೆ ಇದುನ್ಯಾಕ್ ಮಾಡುದ್ರೋಪಾ? ಮನೆತುಂಬ ಮಕ್ಳಿರ್ಬೇಕು ತಾನೆ? ಏನ್ ಸರ್ಕಾರನ ಸಾಕ್ತೈತೆ?”
“ಅಂಗಲ್ವೋ, ನಾಕ್ನೇ ಹೆರ್ಗೆಗೆ ತವಿರಿಗೋದ್ಲಲ್ಲ, ಈರಿ ಎಂಡ್ತಿ ಗಂಗಮ್ಮ, ಸತ್ತಿದ್ಯಾಕೇಳು? ಮಗು ಹಡ್ಯಕ್ ಶಕ್ತಿನೇ ಇರ್ಲಿಲ್ವಂತೆ. ಇಂಗೆ ನಮ್ದೊಂದೂರಗೇ ಎಷ್ಟ್ ಜನ ಸತ್ತಿಲ್ಲ ನೀನೇ ಯೇಳು..?  ಇನ್ನು ಇಡೀ ದೇಶ್ದಗೆ ಎಷ್ಟ್ ಜನ್ರೋ..?!”
“ಹೂಂ, ಅದೂ ಅಲ್ದೆ, ಹುಟ್ದೋರಿಗೆಲ್ಲಾ ಮನೆ-ಕೆಲ್ಸ ಎಲ್ಲಾ ಬೇಕಲಪಾ, ಎಲ್ಲಿಂದ ತರಾದು? ಸುಮ್ಕಿರು, ಅದ್ಯಾತ್ ಮಾಡ್ತಾರೋ ಮಾಡ್ಲಿ.”
ಇನ್ನೂ ಏನೇನೋ ಮಾತುಗಳು ಅಲ್ಲಿ ಹಾದುಹೋಗುತ್ತಿದ್ದವು. ಆಗಲೇ, ಎಲ್ಲರ ಮಾತೂ ಅವರೋಹಣಕ್ಕಿಳೀತು. ಎಲ್ಲರ ಕಣ್ಣುಗಳು ಒಂದೇ ಕಡೆ ನೆಟ್ಟವು. ನಿಗಿನಿಗಿ ಕೆಂಡಕಾರುವ ಕೆಂಪು ಸೀರೆಯುಟ್ಟಿದ್ದ ಬೆಳ್ಳಿ ಆ ಜಗುಲಿ ಕಡೆ ಬಂದಳು…

ಎಲ್ಲರೂ ಒಂದರೆ ಕ್ಷಣ ಗಾಬರಿಯಾದರು. ಬೆಳ್ಳಿ, ಊರೊಳಗೆ ಬರೋದು ತುಂಬಾ ಅಪರೂಪ. ಅಪರೂಪವೇನು ಬಂತು, ಬರೋದೇ ಇಲ್ಲ. ಅಂಥವಳು ನೇರವಾಗಿ ದೇವಸ್ಥಾನಕ್ಕೇ ಬರುತ್ತಿದ್ದಾಳೆ. ಅಲ್ಲಿ ಕೂತಿದ್ದವರಲ್ಲಿ ರಾಮಯ್ಯನವರನ್ನ ಬಿಟ್ಟರೆ, ಮಿಕ್ಕೆಲ್ಲರೂ ಅವಳ ಮನೆಯಲ್ಲಿ ಊಟ ಮಾಡಿದವರೆ. ಆದರೆ ಸಭ್ಯ ಸಮಾಜದವರಂತೆ ತೋರಿಸಿಕೊಳ್ಳಲು, ಬೆಳ್ಳಿ ಅಂದರೆ ಇವಳೇ ಅಂತಲೂ ಗೊತ್ತಿಲ್ಲದ ಹಾಗೆ ಕೂತಿದ್ದರು.

ಎಲ್ಲರಿಗೂ ಭಯ, ಬೆಳ್ಳಿ ಎಲ್ಲಿ ತಮ್ಮ ಬಗ್ಗೆ ಏನು ಮಾತಾಡಿಬಿಡುತ್ತಾಳೋ ಅಂತ. ಆದರೆ ಬೆಳ್ಳಿ ಬಂದ ಕಾರಣವೇ ಬೇರೆ ಇತ್ತು. ಬೆಳ್ಳಿಯನ್ನು ಜನರು ಅಪರಿಚಿತಳಂತೆ ನೋಡೋ ಮುನ್ನವೇ ಬೆಳ್ಳಿ ಅವರನ್ನ ಕಾಲಕಸದಂತೆ ಅಸಡ್ಡೆ ಮಾಡಿಯಾಗಿತ್ತು. ಅವಳು ಬಂದದ್ದು, ರಾಮಯ್ಯನೋರನ್ನ ಮಾತಾಡಿಸೋದಕ್ಕೆ. ಕಂಬಕ್ಕೆ ಅಂಟಿ ಕೂತಿದ್ದ ರಾಮಯ್ಯನೋರ ಮುಂದೆ ಕೈಮುಗಿದ ಬೆಳ್ಳಿ,
“ಸೋಮಿಗಳೇ, ನಾನು ಏನು ಅಂತ ನಿಮಿಗೊತ್ತೈತೆ. ಯೇಳಿ, ನನ್ ಪಾಲಿಗೆ ದೇವ್ರಿದಾನೋ ಇಲ್ಲೋ?”
“ದೇವರಿಗೆ ಎಲ್ರೂ ಮಕ್ಳೇ. ನೀನ್ ಏನಾದ್ರೆ ಅವನಿಗೇನು? ನಿನ್ ತವ ಭಕ್ತಿ ಐತಾ? ಸಾಕು. ನಿಂಗ್ ದೇವ್ರಿದಾನೆ.”
“ಅಂಗಾರೆ, ನಾನು ದೇವ್ರ್ ಪೂಜೆ ಮಾಡ್ಬೋದ?”
“ಈ ಗುಡಿಲಾ?” ದಿಗ್ಭ್ರಾಂತರಾಗಿ ಕೇಳಿದರು ರಾಮಯ್ಯನೋರು.
“ಈ ಗುಡಿಯೊಳಕ್ಕೆ ನನ್ ಪಾದಾನು ಇಕ್ಕಲ್ಲ ಸೋಮಿ. ನನ್ಗೆ ಕ್ರುಷ್ಣನ್ನ ಪೂಜೆ ಮಾಡೋ ಆಸೆ ಆಗೈತೆ. ನಂಗ್ ಪೂಜೆ ಗೀಜೆ ಬರಲ್ಲ. ಒಂದೇ ಒಂದಪ, ನೀವ್ ಪೂಜೆ ಮಾಡ್ ತೋರ್ಸಿ. ನಾನ್ ಕಲ್ತ್ಕತೀನಿ. ದಮ್ಮಯ್ಯ” ಅಂದು ಕೈಮುಗಿದಳು. ಅವಳ ಕಂಗಳಲ್ಲಿ ನೀರು ತುಂಬಿಕೊಂಡಿತ್ತು.

ಆದರೆ ಈ ಮಾತಿಗೆ ಒಪ್ಪಿಗೆ ಕೊಡೋದು ಹೇಗೆ? ತಾನು ಆ ಕೊನೆಮನೆಗೆ ಹೋಗಿ, ಪೂಜೆ ಮಾಡಿಸೋದೆ? ಎಲ್ಲಾದರೂ ಉಂಟೆ? ಹಾಗಂತ, ಭಕ್ತೆಯನ್ನ ನಿರಾಸೆಗೊಳಿಸಿದರೆ ಭಗವಂತ ಮೆಚ್ಚಿಯಾನೆ? ಇದಕ್ಕೆ ಉತ್ತರ ಹೇಳೋದಕ್ಕೆ ರಾಮನೇ ಬರಬೇಕು. ಆದರೆ ಅವನು ಬರಲಾರ, ಯಾಕೆಂದರೆ, ಇಲ್ಲೀ ತನಕ ಯಾವತ್ತೂ ಅವನು ಗರ್ಭಗುಡಿ ಬಿಟ್ಟು ಆಚೆ ಬಂದಿಲ್ಲ.

ಐನೋರ ದೃಷ್ಟಿ ಊರಿನ ಹಿರಿಯರ ಕಡೆ ಹೊರಳಿತು. ಅರ್ಧ ಜನ ಬೇಡ ಅಂತ ತಲೆಗುಣುಕು ಹಾಕಿದರು. ಉಳಿದರ್ಧ ಜನ ಹೋಗಿ ಬನ್ನಿ ಅಂತ ತಲೆಯಾಡಿಸಿದರು. ರಾಮಯ್ಯನೋರು ತಮ್ಮ ಮನಸ್ಸು ಬಯಸಿದ್ದ ಫಲಕ್ಕೇ ತೂಕ ಹೆಚ್ಚಿಸಿ, ಪೂಜೆ ಹೇಳಿಕೊಡೋಕೆ ಒಪ್ಪಿದರು.

ಮಾರನೇ ದಿನ. ಗುಡಿಯ ಪಕ್ಕದಲ್ಲಿ, ರಾಮಯ್ಯನೋರು ಬೆಳ್ಳಿಗೆ ಪೂಜೆ ಮಾಡೋದನ್ನ ಹೇಳಿಕೊಡ್ತಿದ್ದರು. ಪಕ್ಕದಲ್ಲಿ ಕಿರಿಯ ಮಗ ಗಿರೀಶನೂ ಇದ್ದ. ಭಗವಂತ ಮಂತ್ರಗಿಂತ್ರಕ್ಕೆಲ್ಲಾ ಒಲಿಯುವವನಲ್ಲ. ಯಾವ ಮಂತ್ರ ಹೇಳಿದ್ದ ಅಂತ ಅರ್ಜುನನಿಗೆ ಕೃಷ್ಣ ಗೆಳೆಯನಾದ? ಯಾವ ಶ್ಲೋಕ ಹೇಳಿದ್ದ ಅಂತ ಗುಹನನ್ನ ರಾಮ ಗುಂಡಿಗೆಗೆ ಅಪ್ಪಿಕೊಂಡಿದ್ದ? ಭಕ್ತಿ ಇರಬೇಕು ಅಷ್ಟೆ, ಭಕ್ತಿ. ಅದೊಂದೇ ದೇವರನ್ನು ಒಲಿಸಿಕೊಳ್ಳೊ ಮಂತ್ರ-ತಂತ್ರ-ಯಜ್ಞ-ಎಲ್ಲಾ…

ಬೆಳ್ಳಿ, ದೇವರ ಪೂಜೆ ಆರಂಭಿಸಿದ್ದಳು. ರಾಮಯ್ಯನೋರು ಬೆಳ್ಳಿಯ ಬಗ್ಗೆಯೇ ಆಲೋಚಿಸುತ್ತಿದ್ದರು. ಮಲ್ಲಿಗೆ ಹೂವಿನಂತಹ ಅವಳ ದೇಹ, ಗೋಧೂಳಿ ಮುಗಿಲಿನಂತಹ ತುಟಿ, ಕಡುಗಪ್ಪು ಕೂದಲು, ದೇವಸ್ಥಾನ ಕಂಬದಲ್ಲಿದ್ದ ಆ ಸ್ರ್ತೀಶಿಲ್ಪವನ್ನೇ ಹೋಲುವ ಶರೀರ… ಯಾಕಾಗಿ ರಾಮಯ್ಯನೋರಿಗೆ ಹೀಗೆ ನೆನಪಾಗುತ್ತಿತ್ತೋ ಏನೋ, ಆ ಬೆಲೆವೆಣ್ಣಿನ ರೂಪ..?

ಊಹುಂ. ಬೆಳ್ಳಿಯ ನೆನಪಿಲ್ಲದೆ ರಾಮರ ಸೇವೆ ಮಾಡಲು ಸಾಧ್ಯವೇ ಆಗುತ್ತಿಲ್ಲ. ದೇವಿರಿಗೆ ಬೆಳ್ಳಿಕವಚ ಹಾಕುವಾಗಲೂ ಅವಳದೇ ನೆನಪು. ಮೊಮ್ಮಗನ ಬೆಳ್ಳಿ ಉಡಿದಾರ ನೋಡಿದಾಗಲೂ ಅದೇ ನೆನಪು. ಪಕ್ಕದೂರಿನವರು ಭೂಮಿಪೂಜೆಗೆ ಕರೆದು ಬೆಳ್ಳಿ  ಗೋದಾನ ಕೊಟ್ಟಾಗಲೂ ಅವಳದೇ ನೆನಪು! ರಾಮರ ಸೇವೇಯೇ ಮುಖ್ಯ ಅಂದುಕೊಂಡಿದ್ದವರಿಗೆ ಯಾಕೆ ಹೀಗಾಯಿತು?

ಮಧ್ಯರಾತ್ರಿ. ಹೆಂಡತಿ ಪಕ್ಕದಲ್ಲಿ ರಾಮಯ್ಯನೋರು ಮಲಗಿದ್ದಾರೆ. ಆದರೆ ನೆನಪಲ್ಲಿ ತುಂಬಿಕೊಂಡಿರೋದು ಆ ಕೊನೆಮನೆಯಲ್ಲಿ ಈಗ ಯಾರ ಜೊತೆಗೋ ಮಲಗಿರಬಹುದಾದ ಬೆಳ್ಳಿ… ನಿದ್ದೆ ಹಾಳಾಗಿ ಹೋಯ್ತು. ನೆಮ್ಮದಿಯೇ ಇಲ್ಲ. ಅದು ಬೇಕು… ಅದೇ ಬೇಕು. ರಾಮ ನೀನೆ ಅದನ್ನ ಕೊಡಬೇಕು. ರಾಮಯ್ಯನೋರಿಗೆ ರಾಮನೊಬ್ಬನೇ ದಿಕ್ಕು.

ಬೆಳ್ಳಿಯ ಸಹವಾಸ ಮಾಡಲು ಏನೆಲ್ಲಾ ದಾರಿಗಳಿವೆಯೋ ಅವೆಲ್ಲವನ್ನೂ ಹುಡುಕಾಡುತ್ತಿದ್ದರು. ಆಗಲೇ ತಾವು ಚಿಕ್ಕವರಿದ್ದಾಗ ಕೇಳಿದ್ದ ಆ ಕಥೆ ನೆನಪಾಯಿತು…

ಒಂದೂರಲ್ಲಿ ಒಂದು ದೇವಸ್ಥಾನವಿತ್ತಂತೆ. ಅಲ್ಲೊಬ್ಬರು ಪೂಜಾರ್ರಿದ್ದರಂತೆ. ಆ ದೇವಸ್ಥಾನದೆದುರು ಒಂದು ಮನೆ ಇತ್ತಂತೆ. ಅಲ್ಲೊಬ್ಬಳು ವೇಶ್ಯೆ ಇದ್ದಳಂತೆ. ಇಬ್ಬರೂ ಒಂದೇ ಕಾಲಕ್ಕೆ ಸತ್ತರು. ಆಗ ಪೂಜಾರಿಗಳನ್ನು ಕರೆದೊಯ್ಯೋಕೆ ಕಿಂಕರರು, ವೇಶ್ಯೆಯನ್ನು ಕರೆದೊಯ್ಯೋಕೆ ವಿಷ್ಣುಸೇವಕರು ಬಂದರಂತೆ. ಪೂಜಾರಿಗೆ ಅಚ್ಚರಿ-ಗಾಬರಿ! “ನಾನು ದೈವಭಕ್ತ. ಸದಾ ದೇವರ ಸೇವೆ ಮಾಡುತ್ತಿದ್ದವನು. ನನ್ನನ್ನ ನರಕಕ್ಕೆ ಕರೆದೊಯ್ದ, ಆ ಸೂಳೆಯನ್ನ ಸ್ವರ್ಗಕ್ಕೆ ಕರೆದೊಯ್ತಾ ಇದ್ದೀರಲ್ಲ? ಇದ್ಯಾವ ನ್ಯಾಯ?” ಅಂತ ಗೋಳಾಡಿದರಂತೆ. ಆಗ ಕಿಂಕರರು “ನೀನು ದೇವರ ಸೇವೆ ಮಾಡುತ್ತಿದ್ದೆ, ಆದರೆ ಮನಸೆಲ್ಲಾ ಆ ವೇಶ್ಯೆ ಏನು ಮಾಡುತ್ತಿದ್ದಾಳೆ ಅಂತ ಯೋಚಿಸುತ್ತಾ ವ್ಯಭಿಚಾರ ಮಾಡುತ್ತಿತ್ತು. ಅವಳು, ತನ್ನ ಕೆಲಸ ಮಾಡುವಾಗ, ದೇವರು ನನ್ನನ್ನು ಕ್ಷಮಿಸಲಿ ಅಂತ ದೇವರ ಸ್ಮರಣೆ ಮಾಡುತ್ತಿದ್ದಳು. ದೇಹಕ್ಕಿಂತ ಮನಸ್ಸು ಮುಖ್ಯ. ಹಾಗಾಗಿ ಅವಳು ಸ್ವರ್ಗಕ್ಕೆ, ನೀನು ನರಕಕ್ಕೆ”.

ಈ ಕಥೆಯೇ ರಾಮಯ್ಯನವರಿಗೆ ಆಧಾರವಾಯ್ತು. “ದೇಹಕ್ಕಿಂತ ಮನಸ್ಸು ಮುಖ್ಯ” ಈ ದೇಹ ಯಾವುದಕ್ಕಾಗಿ ಹಪಹಪಿಸುತ್ತಿದೆಯೋ ಅದನ್ನ ಕೊಟ್ಟುಬಿಡೋಣ. ಒಂದು ಬಾರಿ ಚಟ ತೀರಿದರೆ, ಮತ್ತೆ ಮತ್ತೆ ಅದು ಬೇಕು ಅನ್ನಿಸೋದಿಲ್ಲ. ಈಗ ತನ್ನ ಹೆಂಡತಿಯನ್ನು ಕಂಡರೆ ಹೇಗೆ ನಿರ್ಭಾವವಾಗುತ್ತೋ ಅದೇ ಥರ ಬೆಳ್ಳಿಯ ಮೇಲೂ ಅಸಡ್ಡೆ ಬಂದೇ ಬರುತ್ತೆ. ಒಳಗೇ ಹಿಂಸೆ ಅನುಭವಿಸೋದಕ್ಕಿಂತ, ಸುಖಿಸಿ ಅನುಭವಿಸೋದೇ ವಾಸಿ, ಅನ್ನೋ ನಿರ್ಧಾರಕ್ಕೆ ಬಂದಿದ್ದರು ರಾಮಯ್ಯನೋರು.

ಆದರೂ ಅವರು ಈ ನಿರ್ಧಾರಕ್ಕೆ ಅಂಟಿಕೊಳ್ಳಲು ಒಂದು ವಾರ ಬೇಕಾಯ್ತು. “ರಾಮ, ನೀನೇ ನನ್ ಮನ್ಸುನ್ನ ತಡಿಬೇಕು ತಂದೆ” ಅಂತ ಬೇಡಿಕೊಂಡರು. ತ್ರೇತಾಯುಗದಿಂದಲೂ ಅಷ್ಟೆ, ರಾಮ ಯಾರನ್ನೂ ನಿರ್ಬಂಧಿಸುವವನಲ್ಲ. ರಾಮಯ್ಯನೋರನ್ನೂ ನಿರ್ಬಂಧಿಸಲಿಲ್ಲ. ರಾಮನೇ ನನ್ನನ್ನು ತಡೆಯದಿದ್ದಮೇಲೆ, ಅವನ ಅಪ್ಪಣೆ ಸಿಕ್ಕ ಹಾಗೆಯೇ ಅಂತ ತೀರ್ಮಾನಿಸಿದ ರಾಮಯ್ಯನವರು, ಆ ರಾತ್ರಿಗಾಗಿ ಕಾದರು.

ರಾಮಯ್ಯನವರು ತೀರ್ಮಾನಿಸಿದ್ದರು. ತನ್ನ ದೇಹ ಅದೇನೇ ಮಾಡಲಿ, ಮನಸ್ಸಿನ ತುಂಬಾ ರಾಮನೇ ತುಂಬಿರಬೇಕು. ದೇಹಕ್ಕಂಟುವ ಕೊಳಕು, ಮನಸ್ಸನ ಸಣ್ಣ  ಮೂಲೆಯನ್ನೂ ತಲುಪಬಾರದು. ಇದೇ ಶಪಥ ಮಾಡಿ, ಬೆಳ್ಳಿ ಮನೆಯ ಬಾಗಿಲು ತಟ್ಟಿದರು.

ಅಂದು ಬೆಳ್ಳಿ, ತನ್ನ ಕಣ್ಣೆದುರಿನ ದೇವರನ್ನ ತೃಪ್ತಿಗೊಳಿಸುವ ಹಂಬಲ ಪಟ್ಟಿದ್ದಳು. ಹಿಂದೆಂದೂ ಯಾರೂ ಈ ಪರಿ ಚೆಲುವಿನ ಬೆಳ್ಳಿಯನ್ನು ನೋಡಿರಲಿಲ್ಲ. ಅಂಗಾಂಗವನ್ನೂ ದೇವರ ಅರ್ಚನೆಗೆ ಸಿದ್ಧಗೊಳಿಸೋ ಬೆಳ್ಳಿಬಟ್ಟಲಂತೆ ತೊಳೆದಿಟ್ಟಿದ್ದಳು. ಅವಳ ಮಂಚದ ಮೇಲೆಲ್ಲಾ ಜಾಜಿಮಲ್ಲಿಗೆ, ಸಂಪಿಗೆಯ ಎಸಳು ಚೆಲ್ಲಿಯಾಗಿತ್ತು. ತನ್ನ ದೇವರನ್ನ ಕೈಹಿಡಿದು ಮಂಚದ ಮೇಲೆ ಕೂರಿಸಿಕೊಂಡಳು ಬೆಳ್ಳಿ.

“ಸೋಮಿಗ್ಳೇ, ನೀವು ನನ್ ದ್ಯಾವ್ರು. ಈ ಎಂಜಲೆಲೆ ಮ್ಯಾಲೆ ನಿಮ್ ದೃಷ್ಟಿ ಬಿದ್ದು ನನ್ ಜೀವ್ನ ಪೌವ್ನ ಆಯ್ತು... ಆದ್ರೆ...”
“ಏನ್ ಆದ್ರೆ ಬೆಳ್ಳಿ?” ಗಲ್ಲ ಹಿಡಿದು ಕೇಳಿದರು.
“ದೇವ್ರಾರದ್ನೆ ಮಾಡೋರ್ ನೀವು, ಇಂಗ್ ಮಾಡ್ಬೋದಾ..?”
ಒಂದರೆ ಕ್ಷಣ ಮೌನದ ಬಳಿಕ, “ಇದು ದೇವಾರಾಧನೆನೇ… ಕಾಮದೇವಾರಾಧನೆ.. ಬಾ”

ಮೈ ಚೆಲ್ಲಿದವು. ಘಟಸರ್ಪದಂತೆ ತಿಂಗಳಿಂದಲೂ ಬುಸುಗುಡುತ್ತಿದ್ದ ರಾಮಯ್ಯನೋರು ಈಗ ಯಾವ ಸದ್ದೂ ಇಲ್ಲದೆ ಬೆಳ್ಳಿಬಟ್ಟಲೊಳಗೆ ಬಿದ್ದು ವದ್ದಾಡಿದರು. ಬೆಳ್ಳಿಯ ಪಾಲಿಗಿದು ದೈವಾರಾಧನೆ. ರಾಮಯ್ಯನೋರಿಗೆ ಕಾಮಕೇಳಿ. ಹಾಗಾಗಿಯೇ ಅಲ್ಲಿ ಶ್ರೀರಾಮುರು ಬರಲೇ ಇಲ್ಲ. ಅಲ್ಲಿ ದೇವರಿರಲಿಲ್ಲ.

ಎಲ್ಲಾ ಮುಗೀತು. ರಾಮಯ್ಯನೋರು ಪಂಚೆ ಕಟ್ಟಿಕೊಳ್ಳುತ್ತಿದ್ದರು. ಸೆರಗು ಅವುಚಿ ಕೂತಿದ್ದ ಬೆಳ್ಳಿ ಕೇಳಿದಳು,
“ಸೋಮಿಗ್ಳೇ, ನಂದೊಂದು ಪ್ರಶ್ನೆ..”
“ಹ್ಮ್...ಕೇಳು”
“ನಾನ್ ಬೇರೆವ್ರ್ ಸವ್ವಾಸ ಮಾಡ್ತೀನಿ ಅಂತ ಎಲ್ರೂ ನನ್ನ ಸೂಳೇ ಸೂಳೇ ಅಂತಾರಲ್ಲ, ಈಗ ನನ್ ಸವ್ವಾಸ ಮಾಡಿದ್ ನೀವು ಸೂಳಾ ಆಗ್ಲಿಲ್ವಾ..?”

ಕಣ್ಣಿಗೆ ಕಾಣದ ಮಿಂಚೊಂದು ರಾಮಯ್ಯನೋರ ತಲೆಗೆ ಅಪ್ಪಳಿಸಿತ್ತು. ಅರ್ಧಬಿಗಿದ ಪಂಚೆಯಲ್ಲೇ ಅಲ್ಲಿಂದ ಬಿರುಸು ಹೆಜ್ಜೆಗಳನ್ನಿಟ್ಟರು ರಾಮಯ್ಯನೋರು. ಅವರು ಸೀದಾ ಹೋಗಿದ್ದು, ತನ್ನ ದೇವರಿದ್ದ ರಾಮಮಂದಿರಕ್ಕೆ. ಇನ್ನೇನು ದೇವಸ್ಥಾನದ ಮೆಟ್ಟಿಲು ಹತ್ತಬೇಕು, ಯಾರೋ ಕೂಗಿದರು “ನಿನ್ನಂಥವನಿಗಲ್ಲ ಶ್ರೀರಾಮರ ಸೇವೆಯ ಸೌಭಾಗ್ಯ. ನಿನಗಿಲ್ಲ ರಾಮರ ಸ್ಮರಣೆ ಮಾಡೋ ಅಧಿಕಾರ. ರಾಮರ ಹೆಸರು ಹೇಳೋ ಯೋಗ್ಯತೆ ನಿನ್ನಂಥವನಿಗಿಲ್ಲ. ಅಯೋಗ್ಯ. ಅಯೋಗ್ಯ. ಅಯೋಗ್ಯ ನೀನು”

ರಾಮಯ್ಯನವರು ಅಲ್ಲೇ ಕುಸಿದು ಬಿದ್ದರು. ಅದೇ ಅವರ ಕೊನೆಯ ಕುಸಿತ…

-ನಾದೀ

No comments:

Post a Comment

ಊರ್ಮಿಳೆಯ ತಪಸ್ಸು!

ಊರ್ಮಿಳೆಯ ತಪಸ್ಸು..! ‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ...