ಊರ್ಮಿಳೆಯ ತಪಸ್ಸು..!
‘ಅಷ್ಟೇನಾ..? ಅಷ್ಟಾಕ್ಕೆ ಅಪ್ಪಾಜಿ ಹೀಗೆ ಚಿಂತಾಕ್ರಾಂತರಾದ್ರಾ? ಈಗೋ, ಇವತ್ತೇ, ಈಗಲೇ ಹೊರಟೆ. ನೀವೇನು ಯೋಚಿಸಬೇಡಿ. ಅಪ್ಪ ಕೊಟ್ಟ ಮಾತನ್ನ ಕಾಯಾವಾಚಾಮನಸಾ, ಶ್ರದ್ಧೆಯಿಂದಲೇ ನೆರವೇರಿಸ್ತೀನಿ’ ರಾಮ ಹಸನ್ಮುಖಿಯಾಗೇ ಹೇಳಿದ.
‘ಪಟ್ಟಾಭಿಷೇಕಕ್ಕೆ ನಿಗದಿಯಾದ ಮುಹೂರ್ತದಲ್ಲೇ, ವನವಾಸಕ್ಕೆ ಪ್ರಯಾಣ’ ಕೈಕೆ ಕಟುವಾಗಿ ಆಜ್ಞಾಪಿಸಿದಳು.
‘ಶುಭಲಗ್ನ, ಶುಭಪ್ರದ. ಬರ್ತೀನಿ ಚಿಕ್ಕಮ್ಮ’ ಅಷ್ಟು ಹೇಳಿ, ಪ್ರಜ್ಞೆ ತಪ್ಪಿ ಮಲಗಿದ್ದ ದಶರಥನ ಕಾಲುಮುಟ್ಟಿ ಆಚೆ ಬಂದ.
ಮಾತು ಮುಗಿಯುತ್ತಿದ್ದ ಹಾಗೇ, ಮಂಗಳವಾದ್ಯ ಮೊಳಗಿತು.
ಇಷ್ಟು ಹೇಳಿದ ರಾಮ, ಬಂದಷ್ಟೇ ಗಾಂಭೀರ್ಯದಿಂದ, ಕೋಪಗೃಹದಾಚೆ ನಡೆದು ಹೋದ. ಕೈಕೆಗೆ ರಾಮನ ಮಾತು ಸಿಡಿಲು ಹೊಡೆಸಿತ್ತು. ಅವಳು ರಾಮನ ಆ ನಿಸ್ಪೃಹತೆಯ ಛಡಿಯೇಟಿಗೆ ಮನದಲ್ಲೇ ಕುಸಿದು ಬಿದ್ದಿದ್ದಳು, ದಶರಥ ದೈಹಿಕವಾಗಿಯೂ ಕುಸಿದು ಕಣ‌್ಣೀರೇ ದೇಹವಾದಂತಿದ್ದ.
ರಾಮ ಆಚೆ ಬಂದಾಗ, ಅವನ ಕಣ್ಣಿಗೆ ಕೋಪೋದ್ರಿಕ್ತನಾಗಿದ್ದ ಲಕ್ಷ್ಮಣ ಕಂಡ. ರಾಮನೊಟ್ಟಿಗೆ ಬರುವಾಗಲೂ, ಅಣ್ಣನಿಗೆ ಏನಾದರೂ ತೊಂದರೆಯಗಬಹುದಾ ಅನ್ನೋ ಅನುಮಾನ ಮೂಡಿತ್ತು. ಆದರೆ ಇಂಥದ್ದೊಂದು ಘನಘೋರ ಅನ್ಯಾವಾಗುತ್ತೆ ಅನ್ನೋ ಕಲ್ಪನೆಯೂ ಇರಲಿಲ್ಲ. ಲಕ್ಷ್ಮಣ, ಕಟಕಟ ಅಂತ ಹಲ್ಲುಮಸೆಯುತ್ತಿದ್ದ ಸದ್ದು ಕೇಳಿಯೇ ಲಕ್ಷ್ಮಣನ ಅವೇಶ ಎಷ್ಟಿದೆ ಎಂಬುದು ರಾಮನಿಗೆ ಗೊತ್ತಾಯ್ತು. ಏನೂ ಮಾತಾಡದೆ, ಸಣ್ಣ ನಗೆ ನಕ್ಕು, ಹೆಗಲ ಮೇಲೆ ಕೈ ಹಾಕಿಕೊಂಡು, ಅಲ್ಲಿಂದ ಹೊರಬಂದ. ಲಕ್ಷ್ಮಣನ ಹೆಗಲ ಮೇಲಿದ್ದ ಕೈ ಕಂಪಿಸುತ್ತಿತ್ತು, ಲಕ್ಷ್ಮಣನ ಅವೇಶದ ರಭಸಕ್ಕೆ.
=-=-=-
‘ಓಂ ಭೂರ್ಭುಸ್ವಃ ತತ್ಸತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾತ್..’’
ಕೌಸಲ್ಯೆ ಶ್ರದ್ಧೆಯಿಂದ ಪಠಿಸುತ್ತಿದ್ದಳು, ಪಟ್ಟಪೀತಾಂಬರ ತೊಟ್ಟ ರಾಮ ಆಕೆಯ ಕೋಣೆಗೆ ಕಾಲಿಟ್ಟಾಗ. ರಾಮ ಬಂದದ್ದು ತಾಯ ಕರುಳಿಗೆ ತಿಳಿದಂತೆ ಕಾಣುತ್ತೆ, ಮೆಲ್ಲಗೆ ಕಣ್ಬಿಟ್ಟು ನೋಡಿದಳು, ತನ್ನ ಕುಲದೇವ ಸೂರ್ಯನಾರಾಯಣನೇ ದಿವ್ಯ ಪ್ರಭೆಯೊಂದಿಗೆ ಬಂದು ನಿಂತಂತೆ ಶೋಭಿಸುತ್ತಿದ್ದ, ತನ್ನ ಮಡಿಲಲ್ಲಿ ಆಡಿ ಬೆಳೆದ ರಾಮ. ತನ್ನೆರಡೂ ಕೈಗಳನ್ನೂ ಮೇಲತ್ತಿ, ‘ಶುಭಮಸ್ತು ರಾಮ..’ ಎಂದು ಇನ್ನೂ ಏನೋ ಹೇಳಲು ಮುಂದಾದಳು, ಅಷ್ಟರಲ್ಲಿ ರಾಮ ತನ್ನ ಮಾತಿಗಳನ್ನ ಆರಂಭಿಸಿದ.
‘ಅಮ್ಮಾ, ಅಪ್ಪಾಜಿ ಈಗ ಮುಖ್ಯವಾದ ಕೆಲಸವೊಂದನ್ನ ಒಪ್ಪಿಸಿದ್ದಾರೆ. ಅದನ್ನ ನಿರ್ವಹಿಸೋಕೆ ಏನಿಲ್ಲದಿದ್ದರೂ ನಿನ್ನ ಆಶಿರ್ವಾದವಂತೂ ಬೇಕೇ ಬೇಕು. ಅನುಗ್ರಹಿಸು.’ ಅಂತ ತುಟಿಯಂಚಲಿ ಮಧುನಗೆ ಸೂಸುತ್ತ ಹೇಳಿದ.
ರಾಮ, ರಾಜ್ಯಪಾಲನೆ ಬಗ್ಗೆ ಹೇಳುತ್ತಿದ್ದಾನೆಂದು ಭಾವಿಸಿದ ಕೌಸಲ್ಯೆ, ಸಂಭ್ರಮದಿಂದ ತಲೆಯಾಡಿಸಿದಳು, ಅದೇನು ಹೇಳು ಎಂಬಂತೆ. ರಾಮ ಹೇಳಲು ಶುರುವಿಟ್ಟ, ಕೌಸಲ್ಯೆ, ದೇವರ ಮುಂದಿದ್ದ ತಿಲಕವನ್ನ ಕೈಗೆತ್ತಿಕೊಂಡು ರಾಮನ ಹಣೆಗಿಡಲು ಮುಂದಾದಳು.
‘ಅಪ್ಪಾಜಿ, ಚಿಕ್ಕಮ್ಮ ಕೈಕೆಗೆ ಎರಡು ವರ ಕೊಟ್ಟಿದ್ದರಂತಲ್ಲಾ..?’, ಹೌದೆಂದು ಹೂಂಗುಟ್ಟಿದಳು ಕೌಸಲ್ಯೆ, ಹಣೆಗೆ ಕುಂಕುಮವಿಟ್ಟು, ಹುಬ್ಬುಗಂಟಿಕ್ಕಿ. ‘ಅದನ್ನ ಈಗ ಕೇಳಿದರಂತೆ. ಅಪ್ಪಾಜಿಯೂ ನೀಡಲು ಮುಂದಾಗಿದ್ದಾರೆ, ಆದರೆ ಅವರ ಮಾತು ನಡೆಸೋ ಹೊಣೆ ಈಗ ನನ್ನ ಮೇಲಿದೆ. ಭರತನಿಗೆ ಪಟ್ಟಕಟ್ಟುತ್ತಾರಂತೆ…’ ಕೌಸಲ್ಯೆಯ ಕಣ್ಣಲ್ಲಿ ಹನಿಗೂಡಿತು. ‘ನಾನು ಜಟಾವಲ್ಕಧಾರಿಯಾಗಿ, ಹದಿನಾಲ್ಕುವರ್ಷ ವನವಾಸ ಅನುಭವಿಸಬೇಕಂತೆ..’ ಕೌಸಲ್ಯೆಯ ಕಣ್ಣು ಕೋಡಿಯೊಡೆದು ಧಾರಾಕಾರವಾಗಿ ಹರಿಯಲಾರಂಭಿಸಿತು. ದೇವಪೀಠದ ಮೆಟ್ಟಿಲಮೇಲೆ ಕುಸಿದು ಬಿದ್ದಳು.
ರಾಮನಿಗೆ ಗೊತ್ತಾಯ್ತು. ಇಲ್ಲೇ ಇದ್ದರೆ ಕೆಲಸ ಕೆಡುತ್ತೆ ಅಂತ. ಆಶಿರ್ವಾದ ಮಾಡಮ್ಮ ಅಂತ ಕಾಲಿಗೆ ಬಿದ್ದು, ಅಲ್ಲಿಂದ ಹೊ ಹೊರಟ. ಲಕ್ಷ್ಮಣನೂ ಅಷ್ಟು ಹೊತ್ತಿಗೆ ಕೌಸಲ್ಯೆಯ ಕೋಣೆ ಪ್ರವೇಶಿಸಿದ. ಕೌಸಲ್ಯೆ ಕೂಗಿದಳು. ‘ರಾಮ ನನ್ನನ್ನು ಒಂಟಿ ಮಾಡಿ ಹೋಗ್ಬೇಡಪ್ಪ. ನಿಮ್ಮಪ್ಪ ಸರಿ ಇಲ್ಲ. ಯೌವನದ ಹೆಣ್ಣಿಗೆ ಶರಣಾಗಿ, ಹೆತ್ತ ಮಗನನ್ನೇ ಕಾಡಿಗಟ್ತಾ ಇರೋ ಆ ಮನುಷ್ಯ, ಇನ್ನು ಹೆಂಡ್ತಿಗೆ ಅನ್ಯಾಯ ಮಾಡದೇ ಇರ್ತಾನಾ? ಆ ಸವತಿ ಸಾಮ್ರಾಜ್ಯಪಾಲನೆ ಮಾಡ್ತಿದ್ರೆ ನನಗೆ ಸುಖವಾದ್ರೂ ಇರುತ್ತಾ? ಹೋಗ್ಬೇಡ ನೀನು. ಹಾಗೂ ಹೋಗೋದಾದ್ರೆ ನನ್ನನ್ನೂ ಕರ್ಕೊಂಡು ಹೋಗು..’ ಆಕ್ರಂದಿಸಿದಳು.
‘ಅಮ್ಮಾ.. ಅಪ್ಪಾ ಇರುವಾಗ್ಲೇ ನೀನು ನನ್ನ ಜೊತೆ ಬರೋದು ಧರ್ಮವಲ್ಲ. ಅಲ್ಲದೆ ಭರತನೇನು ಕೆಟ್ಟವನಲ್ಲ. ನಿನ್ನನ್ನ ಹೆತ್ತಮ್ಮನಿಗಿಂತಲೂ ಹೆಚ್ಚಾಗಿ ನೋಡಿಕೊಳ್ತಾನೆ. ಅವನ ರಾಜ್ಯಪರಿಪಾನೆ ಬಗ್ಗೆ ತಲೆ ಕೆಡಿಸಿಕೊಳ್ಬೇಡ. ನನ್ನ ಧರ್ಮಕ್ಕೆ ಅಡ್ಡಿ ಬರಬೇಡ’ ಅಂತ ರಾಮ ಹೇಳುವಷ್ಟೂ ಹೊತ್ತು ಕೈಮುಗಿದೇ ಇದ್ದ. ಕೌಸಲ್ಯೆ ಪರಿಪರಿಯಾಗಿ ಕೇಳಿಕೊಂಡರೂ ರಾಮ ಕೇಳಲಿಲ್ಲ. ‘ಗಂಡ ಹೇಗಿದ್ದರೂ, ಎಲ್ಲಿದ್ದರೂ, ಒಂದು ವೇಳೆ ತಪ್ಪು ಮಾಡಿದರೂ ಅವನನ್ನು ಅನುಸರಿಸುವುದೇ ಪತ್ನಿ ಧರ್ಮ. ಜನ್ಮಕಾರಕನಾದ ತಂದೆ ಹೇಳಿದಂತೆ ನಡೆಯಬೇಕಾದ್ದು ಪುತ್ರಧರ್ಮ. ಈ ಎರಡೂ ಧರ್ಮಗಳನ್ನ ನಿನ್ನ ವಾತ್ಸಲ್ಯದ ಕತ್ತಿ ಎತ್ತಿ ಛಿದ್ರಿಸಬೇಡ. ಹರಸಮ್ಮ’ ಅಂದು ಅಲ್ಲಿಂದ ಹೊರಡುತ್ತಾನೆ, ಸೀತೆಯಿದ್ದ ಕೋಣೆಯೆಡೆಗೆ.
-=-=-=-=
ಹೋಗುವಾಗ ಲಕ್ಷ್ಮಣ ಆಕ್ರೋಶಭರಿತನಾಗಿ, ಕ್ರೋಧೋನ್ಮತ್ತನಾಗಿ ಹೇಳ್ತಾನೆ, ‘ಅಣ್ಣ, ನೀನು ಹೂ ಅನ್ನು, ಈಗಲೇ, ಈ ಕ್ಷಣವೇ ಆ ಮುದಿರಾಜನ ಕಥೆ ಮುಗಿಸಿಬಿಡ್ತೀನಿ. ಅವನ ಇಡೀ ಸೇನೆಯನ್ನೇ ಧ್ವಂಸಮಾಡಿ ನಿನಗೆ ಪಟ್ಟಕಟ್ತೀನಿ. ಆ ಚಪಲಚಿತ್ತ ಇಂಥಾ ಸಾಕೇತಪುರಿಗೆ ಅರಸನಾಗಿರ್ಬೇಕಾ? ಛೇ. ಅವನು ಅಪ್ಪನೇ ಅಲ್ಲ. ಧರ್ಮ ಧರ್ಮ ಅಂತೀಯಲ್ಲ, ಹಿರಿಮಗನಿಗೆ ಪಟ್ಟಕಟ್ಟೋದೇ ತಾನೇ ಧರ್ಮ? ಆ ಧರ್ಮ ನೆರವೇರಿಸೋಕೆ ನನಗೆ ಅವಕಾಶ ಕೊಡು. ಮಗನನ್ನು ಕಾಡಿಗಟ್ಟೋ ತಂದೆ ತಂದೆನೇ ಅಲ್ಲ. ಏನಂತಿಯಾ? ನಾನಿರ್ತೀನಿ. ನೀನು ರಾಜನಾಗು..’
ಲಕ್ಷ್ಮಣನ ಮಾತು ಮುಗಿಯೋ ಹೊತ್ತಿಗೆ, ಸೀತೆಯ ಅಂತಃಪುರದ ಹೊಸಿಲು ಬಳಿಗಿಬ್ಬರೂ ಬಂದಿದ್ದರು. ಕೋಪದಿಂದ ಕೆಂಪಾಗಿದ್ದ ಲಕ್ಷ್ಮಣನ ಗಲ್ಲ ಹಿಡಿದ ರಾಮ, ‘ಪಟ್ಟ ಕಟ್ತೀನಿ ಅಂದಾಗ ತಂದೆಯಾದವನು, ಕಾಡಿಗೆ ಹೋಗು ಅಂದಾಗ ತಂದೆಯಾಗದೇ ಇರ್ತಾನಾ? ಕಾಡಿಗೆ ಕಳಿಸ್ತಿರೋದು ಕೈಕೆಯೂ ಅಲ್ಲ, ರಾಜ ದಶರಥನೂ ಅಲ್ಲ. ವಿಧಿ. ನೀನು ಹೋರಾಟ ಮಾಡಬೇಕಿರೋದು ವಿಧಿಯ ವಿರುದ್ಧ. ಅದು ಸಾಧ್ಯಾನಾ ಸೋದರ? ಸಾಧು... ಸಾಧು... ಈ ನಿನ್ನ ಕೋಪ ಸರಿಯಾದ್ದಲ್ಲ. ಕೋಪದಲ್ಲಿ ಯಾವ ಮಾತನ್ನೂ ಆಡಬಾರದು ಅಂತ ಹೇಳಿಲ್ವಾ ನಿಂಗೆ? ಹೋಗಿಬರ್ತೀನಿ’ ಅಂದು ಅಲ್ಲಿಂದ ಒಳನಡೆದ.
-=-=-=-=
ಸೀತೆ, ಸರ್ವಾಲಂಕಾರಭೂಷಿತಳಾಗಿ, ಸಾಕ್ಷಾತ್ ಶ್ರೀಲಕ್ಷ್ಮಿಯಂತೆಯೇ ಕಂಗೊಳಿಸುತ್ತಿದ್ದಳು. ಕನ್ನಡಿ ಮುಂದೆ ನಿಂತು, ಕಾಡಿಗೆ ತೀಡುತ್ತಿದ್ದವಳಿಗೆ, ರಾಮನ ಆಗಮನ ಕಂಡಿತು. ಜಯಘೋಷವಿಲ್ಲದೆ, ಹರ್ಷಚಿತ್ತವಿಲ್ಲದೆ, ಭಾರವಾಗಿ ಹೆಜ್ಜೆ ಇಡುತ್ತಾ ಒಳಬಂದ ರಾಮನನ್ನ ನೋಡಿ ಸೀತೆ ಗಾಬರಿಯಾದಳು. ‘ರೀ.. ಏನಿದು? ಯಾಕೆ ಹೀಗಿದ್ದೀರೀ? ಮಾವ ಕರೆದರು ಅಂತ ಹೋದ್ರಲ್ಲ, ಏನಂದರು?’ ಎಂದು ಅನುನಯದಿಂದ ಕೇಳಿದಳು. ರಾಮ ನಡೆದ್ದೆಲ್ಲವನ್ನೂ ಹೇಳಿದ. ಸೀತೆ ಕಂಗಾಲಾದಳು. ರಾಮ ರೇಷಿಮೆಯ ಶಾಲನ್ನು ತೆಗೆದು, ಮಂಚದ ಮೇಲೆ ಎಸೆವಷ್ಟರಲ್ಲಿ, ಸೀತೆಯೂ ತನ್ನ ಕಂಠಾಭರಣಗಳನ್ನೊಂದೊಂದೇ ತೆಗೆದು ಕನ್ನಡಿ ಮುಂದಿನ ಮೇಜಿನ ಮೇಲೆ ಇಡತೊಡಗಿದಳು.
ರಾಮನಿಗೆ ಅಚ್ಚರಿಯಾಯ್ತು. ಏನೋ ಕಾದಿದೆ ಅನ್ನಿಸಿತು. ಕೇಳಿದ, ಯಾಕೆ ಹೀಗೆ ಮಾಡ್ತಿದ್ದೀ ಅಂತ. ಆಗ ಸೀತೆ,
‘ಅಯ್ಯೋ ಭಗವಂತ, ಕಾಡಲ್ಲಿ ಈ ಆಭರಣಗಳನ್ನಿಟ್ಕೊಂಡು ನಾನೇನು ತಾನೇ ಮಾಡೇನು? ಅದೂ ಅಲ್ಲದೆ, ನಾವು ಹೋಗ್ತಿರೋದು ಋಷಿ ಜೀವನ ನಡೆಸೋಕೆ. ಇದೆಲ್ಲಾ ಅಲ್ಯಾಕೆ ಬೇಕು ಹೇಳಿ’ ಅಂದಳು. ರಾಮ ನಿಜಕ್ಕೂ ನಡುಗಿದ. ಸೀತೆ ಅದಾಗಲೇ ವನವಾಸಕ್ಕೆ ಸಂಪೂರ್ಣ ಸಿದ್ಧಳಿರುವುದು ರಾಮನಿಗೆ ಗೊತ್ತಾಯಿತು.
‘ಅಯ್ಯೋ.. ಹೇ ಮಿಥಿಲಾಧಿಪತಿ ಮಗಳೇ, ನೀನು ರಾಣಿ, ಮಹಾರಾಣಿ, ಜನಕನ ಆಸ್ಥಾನದಲ್ಲಿ ಮೆರೆದವಳು. ಅಯೋಧ್ಯಾಪುರಿಗೆ ಅಧಿನಾಯಕಿ ನೀನು. ಹುಲ್ಲಿನ ಮೇಲೂ ಬರೀಗಾಲಲ್ಲಿ ನಡೆದವಳಲ್ಲ. ಬೇಡ, ಬರಬೇಡ. ಅರಣ್ಯವಾಸ ನಿನ್ನಂಥಾ ಕೋಮಲೆಗಲ್ಲ. ನೀನಿಲ್ಲೇ ಇರು. ಅಮ್ಮನ ಆರೈಕೆ ಮಾಡು. ಅಪ್ಪಾಜಿಗೆ ಶುಶ್ರುಷೆ ಮಾಡು. ಅವರಿಗೂ ವಯಸ್ಸಾಗಿದೆ. ಬಿಟ್ಟು ಹೋಗೋದು ಒಳ್ಳೇದಲ್ಲ…’ ರಾಮ ಹೆಚ್ಚೂಕಮ್ಮಿ ಬೇಡಿಕೊಳ್ಳುವವನಂತೆಯೇ ಹೇಳಿದ.
ಸೀತೆ, ಜಪ್ಪಯ್ಯಾ ಅಂದ್ರೂ ಇರೋದಿಲ್ಲ ಅಂತ ಕಟ್ಟುನಿಟ್ಟಾಗಿ ಹೇಳೇ ಬಿಟ್ಟಳು. ರಾಮನಿನ್ನೂ ಸೀತೆಯನ್ನು ಮನವೊಲಿಸುತ್ತಲೇ ಇದ್ದ, ಅಷ್ಟರಲ್ಲೇ ಸ್ವರ್ಣಾಭರಣವನ್ನೆಲ್ಲಾ ಕಳಚಿಟ್ಟು, ಅರಣ್ಯವಾಸಕ್ಕೆ ಯೋಗ್ಯವಾದ ಬಟ್ಟೆಗಳನ್ನ ಕಪಾಟಿನಿಂದ ಹೊರತೆಗೆಯುತ್ತಿದ್ದಳು. ರಾಮನ ಕಣ್ಣೂ ತುಂಬಿಬಂದಿತ್ತು, ಸೀತೆಯ ಹಠಕ್ಕೆ. ಆಗ ಸೀತೆ, ರಾಮನ ಹೆಗಲಿಗೆ ತಲೆಯಾನಿಸಿ ಹೇಳಿದಳು, ‘ಸ್ವಾಮಿ, ನನ್ನನ್ನ ಕರೆಯೋದೇ ನಿಮ್ಮ ಅರ್ಧಾಂಗಿ ಅಂತಲ್ಲವೇ? ನಿಮ್ಮ ದೇಹದ ಅರ್ಧಭಾಗವನ್ನೇ ಬಿಟ್ಟು ಹೋಗೋದು ಎಷ್ಟು ಸರಿ? ಅದಿರ್ಲಿ, ನಿಮ್ಮ ಮಾವ, ನಿಮ್ಮ ಕೈಯಲ್ಲಿ ನನ್ನ ಕೈಯಿರಿಸಿ ನಿಮಗೂ ನನಗೂ ಏನು ಹೇಳಿದ್ದರು ನೆನಪಿದೆಯಾ? ಒಬ್ಬರಿಗೊಬ್ಬರು ನೆರಳಾಗಿರಬೇಕು, ಎಂಥದ್ದೇ ಸಂದರ್ಭದಲ್ಲೂ ಬೇರಾಗಬಾರದು ಅಂದಿದ್ದರೋ ಇಲ್ವೋ? ಈಗ ನನ್ನನ್ನ ಬಿಟ್ಟು ನೀವಿರ್ತೀರಾ? ನೀವಿರ್ತಿರೇನೋ, ಆದರೆ, ನನ್ನಿಂದ ಸಾಧ್ಯವಿಲ್ಲ. ಈ ಕೊಂಪೆಯಲ್ಲಿ ನನ್ನನ್ನು ಒಂಟಿಮಾಡಬೇಡಿ..’ ಎಂದು. ರಾಮನ ಎದೆಯೆಲ್ಲಾ ಜಾನಕಿಯ ಕಂಬನಿಯಿಂದ ತೋಯ್ದಿತ್ತು. ರಾಮ ಇನ್ನೂ ಮಾತಾಡಲಿಲ್ಲ. ‘ರೀ.. ನೀವಿದ್ದರೆ ಅರಣ್ಯವೂ ನನಗೆ ಅರಮನೆಯೇ, ನೀವಿಲ್ಲದಿದ್ದರೆ ಅರಮನೆಯೂ ಅರಣ್ಯವೇ. ದಮ್ಮಯ್ಯ.. ಒಂಟಿ ಮಾಡಿ ಹೋಗ್ಬೇಡಿ..’ ಬಿಕ್ಕಳಿಸಿ ಅತ್ತಳು ಸೀತೆ. ರಾಮ ಸೋತ. ಸೀತೆಗೂ ಕಾಡಿಗೆ ಬರಲು ಸಮ್ಮತಿಸಿದ.
ಇಬ್ಬರೂ ಕೋಣೆಯಿಂದೀಚಿ ಬರುವಷ್ಟರಲ್ಲಿ, ’ಅಣ್ಣ, ನೀನು ಕೊಟ್ಟಿದ್ದ ಮಾತು ಮರೆತ್ಯಾ? ನೀನೆಲ್ಲೇ ಇದ್ದರೂ ನನ್ನನ್ನ ಬಿಟ್ಟು ಹೋಗೊದಿಲ್ಲಾಂತ ಮಾತು ಕೊಟ್ಟಿದ್ದೆ. ನಿನ್ನ ಮಾತನ್ನ ಉಳಿಸಿಕೋ ಮೊದಲು, ಆಮೇಲೆ ಬೇಕಿದ್ರೆ ಆ ಮುದುಕನ ಮಾತು ಕೇಳುವೆಯಂತೆ. ನಾನೂ ಹೊರಡ್ತೀನಿ. ನಿನ್ನ ಜೊತೆ ಅರಣ್ಯವಾಸಕ್ಕೆ ನಾನೂ ಬರ್ತಿದ್ದೀನಿ. ಇನ್ನೊಂದು ಮಾತಾಡಿದ್ರೂ ಸರಿಯಿರಲ್ಲ.’ ರಾಮನ ಯಾವ ಮಾತಿಗೂ, ಪ್ರತಿಕ್ರಿಯೆಗೂ ಲಕ್ಷ್ಮಣ ಕಾಯಲೇ ಇಲ್ಲ. ಥೇಟ್ ಆದಿಶೇಷನ ಹಾಗೆ ಬುಸುಗುಡುತ್ತಾ ಹೊರಟೇ ಬಿಟ್ಟ.
=--=-=
ಅಕ್ಕ ಭಾವನ ಖುಷಿಯನ್ನ ನೆನಪಿಸಿಕೊಂಡೇ ಊರ್ಮಿಳೆ, ಲಕ್ಷ್ಮಣನ ಹೆಂಡತಿ ಉಬ್ಬಿ ಹೋಗಿದ್ದಳು. ಸಾಲಂಕೃತಳಾಗಿ ಶುಭಮುಹೂರ್ತಕ್ಕಾಗಿ ಕಾಯುತ್ತಿದ್ದಳು. ಧಡಾರ್ ಅಂತ ಆಕೆಯ ಅಂತಃಪುರದ ಬಾಗಿಲು ಸದ್ದು ಮಾಡಿತು. ಮಂಚಕೊರಗಿ ಮಲಗಿದ್ದ ಊರ್ಮಿಳೆ ಧಿಗ್ಗನೆದ್ದು ಬಾಗಿಲ ಕಡೆ ನೋಡಿದಳು. ಮದ್ದಾನೆ ದಾಳಿಯಿಡುವಷ್ಟು ರಭಸವಾಗಿ ಹೆಜ್ಜೆ ಇಡುತ್ತಾ ಬಂದ ಲಕ್ಷ್ಮಣ. ಊರ್ಮಿಳೆಗೆ ಒಳಗೊಳಗೇ ಭಯ, ಮೊದಲೇ ಕೋಪಿಷ್ಟ, ಯಾರಜೊತೆ ಏನು ಕಿತ್ತಾಡಿದನೋ ಎಂದು ಚಡಪಡಿಸಿದಳು. ಏನಾಯಿತೆಂದು ಕೇಳುವಷ್ಟರಲ್ಲಿ, ’ಊರ್ಮಿ, ನಾನಿರಲ್ಲ, ಇನ್ನು ಹದಿನಾಲ್ಕು ವರ್ಷ, ಅಣ್ಣನಿಗೆ ವನವಾಸ ಪ್ರಾಪ್ತಿಯಾಯ್ತು. ಆ ದುಷ್ಟೆ, ದುರುಳೆ, ಆ ಮಹಾಮೋಸಗಾತಿ ಕೈಕೆ, ರಾಮನ ಪಟ್ಟವನ್ನೂ ಕಿತ್ಕೊಂಡಳು, ಅವನ ಅದೃಷ್ಟವನ್ನೇ ಲಪಟಾಯಿಸದಳು. ಛೀ. ಇನ್ನವಳ ಮಗ ರಾಜ್ಯಭಾರ ಮಾಡ್ತಾನೆ. ನಾನು, ಅಣ್ಣ, ಅತ್ತಿಗೆ ಮೂವರು ವನವಾಸಕ್ಕೆ ಹೋಗ್ತಿದ್ದೀವಿ.’ ಎಂದು ಹೇಳಿ, ಕಿರೀಟ, ವಜ್ರಕವಚ, ಎಲ್ಲವನ್ನೂ ಒಂದು ಮಾತಿಗೊಂದರಂತೆ ಕಿತ್ತೆಸೆಯುತ್ತಾ, ಬಂದಷ್ಟೇ ವೇಗವಾಗಿ ಹೋಗಿಬಿಟ್ಟ.
ಊರ್ಮಿಳೆ ನಿಂತಲ್ಲೇ ಕಲ್ಲಾದಳು. ಕೈಕಾಕಲೇ ಆಡಲಿಲ್ಲ. ಅವಳಿಗೆ ಏನಾಗುತ್ತಿತೆ ಎಂಬುದೇ ಅರ್ಥವಾಗಲಿಲ್ಲ. ಒಂದು ಘಳಿಗೆ ಗರಬಡಿದವಳಂತೆ ನಿಂತಿದ್ದವಳು, ಓಟಕಿತ್ತಳು, ಸುಮಿತ್ರೆಯ ಅಂತಃಪುರ ಹೊಕ್ಕಳು. ಅಲ್ಲಿ ಸುಮಿತ್ರೆ ಇರಲಿಲ್ಲ. ಬಡಬಡ ಅಂತ ಕೈಕೆಯ ಮಂದಿರಕ್ಕೆ ಹೋದಳು, ಅಲ್ಲಿದ್ದಳು ಸುಮಿತ್ರೆ, ಮೂರ್ಛೆ ಬಿದ್ದಿದ್ದ ಕೈಸಲ್ಯೆಯ ತಲೆಸವರುತ್ತಾ…
=-=-
ಊರ್ಮಿಳೆಗೆ ಏನಾಗಿದೆ, ಏನಾಗುತ್ತಿದೆ, ಎಲ್ಲವೂ ಸ್ಪಷ್ಟವಾಯ್ತು. ವನವಾಸ ಬಂದಿದ್ದು, ರಾಮನಿಗಲ್ಲ, ತನಗೆ ಎಂದು ಈಗಂದುಕೊಂಡಳು ಊರ್ಮಿಳೆ. ತಾನೂ ಲಕ್ಷ್ಮಣನ ಜೊತೆ ಹೋಗಲೇ ಎಂದುಕೊಂಡಳು, ಅಷ್ಟರಲ್ಲಿ ಸುದ್ದಿ ಬಂತು, ಸೀತಾರಾಮ ಲಕ್ಷ್ಮಣರು ಅಯೋಧ್ಯೆಯನ್ನು ಬಿಟ್ಟಿದ್ದಾರೆ, ಧನಕನಕವನ್ನೆಲ್ಲಾ ಹಂಚಿ ಕಾಡಿನ ಕಡೆ ಹೋಗಿದ್ದಾರೆ ಅಂತ.
ಊರ್ಮಿಳೆ, ತನ್ನ ದೌರ್ಭಾಗ್ಯಕ್ಕೆ ತನ್ನನ್ನೇ ಶಪಿಸಿಕೊಂಡಳು.
‘‘ಅಯ್ಯೋ ದುರ್ವಿಧಿಯೇ, ಎಂಥಾ ಕೆಲಸ ಮಾಡಿಬಿಟ್ಟೆ. ತುಂಬಿದ ಮನೆಯನ್ನೇ ಹೊಡೆದು ಹಾಕಿದೆಯಲ್ಲಾ.. ಕೈಕೇ, ನೀನು ಕೇಳೀದ್ದು ವರವಲ್ಲ ಶಾಪ. ಇನ್ನು ಸಾಕೇತಪುರಿ ಸ್ಮಶಾಣ ನಗರಿ ಅಷ್ಟೆ. ಈ ಅರಮನೆಯ ತುಂಬಾ ಇನ್ಮುಂದೆ ಪಿಶಾಚಿಗಳೇ ಓಡಾಡುತ್ತವೆ ಹೊರತು, ಮನುಷ್ಯರಲ್ಲ. ರಾಮನ ಪಟ್ಟಾಭಿಷೇಕ, ಎಂಥಾ ಸುವಾರ್ತೆಯಿದು! ಈ ಮಾತನ್ನ ಭಾವನೋ, ದಶರಥನೋ, ಇಲ್ಲ ಕೌಸಲ್ಯೆಯೋ ನೇರವಾಗಿ ಕೈಕೆಯ ಕಿವಿಗೆ ಹಾಕಬಾರದಿತ್ತೆ! ಆ ಕುಬ್ಜೆ ಮಂಥರೆಯಲ್ಲದೆ ಮತ್ಯಾರೇ ಈ ಸುದ್ದಿ ಮುಟ್ಟಿಸಿದ್ದರು ನನಗೀ ಶಾಪ ತಟ್ಟುತ್ತಿರಲಿಲ್ಲ. ಪತಿದೇವ, ಅಣ್ಣನ ಮೇಲಿರುವಷ್ಟು ಪ್ರೀತಿಯಲ್ಲಿ ಕಿಂಚಿತ್ತಾದ್ರೂ ಕಾಳಜಿ, ಕಟ್ಕೊಂಡ ಹೆಂಡತಿ ಮೇಲೆ ನಿನಗಿಲ್ಲವೇ? ನನ್ನೂ ಒಂದು ಮಾತು ಕರೆದಿದ್ದರೆ, ಬರೀ ಕಣ್ಸನ್ನೆಯಲ್ಲಿ ಬಾ ಎಂದಿದ್ದರೂ, ನಿನ್ನ ಪಾದಧೂಳಂತೆ ಹಿಂದಿಂದೆ ಓಡಿಬರುತ್ತಿರಲಿಲ್ಲವೇ? ಅಕ್ಕಾ, ಸೀತಕ್ಕಾ, ನೀನೇ ಅದೃಷ್ಟವಂತೆ ಕಣೆ, ನಾನೂ ನಿನ್ನ ಹಾಗೆ ಅಪ್ಪನ ಹತ್ತಿರವೇ ಬೆಳಿಬೇಕಿತ್ತು. ಆಗ ನಿನ್ನಷ್ಟೇ ಮಾತುಗಾರ್ತಿಯಾಗ್ತಿದ್ದೆ. ಮಾತಲ್ಲೇ ಗಂಡನ ಮನಗೆದ್ದು ವನವಾಸಕ್ಕೆ ಹೋದೆಯಲ್ವಾ? ಹೋಗು ಹೋಗು, ಪತಿಪ್ರೇಮ ಪಡೆದ ಪುಣ್ಯವತಿ ನೀನು. ಅಲ್ವೇ ಅಕ್ಕಾ, ನಿನ್ನ ಮೈದುನ ಬರುವಾಗ, ಒಂದೇ ಒಂದು ಮಾತು ಹೇಳಬೇಕಿತ್ತು ತಾನೇ? ಅಯ್ಯಾ ಲಕ್ಷ್ಮಣ, ಊರ್ಮಿ ಏನಾದ್ರೂ ಬರ್ತಾಳ ಕೇಳೀ ನೋಡಯ್ಯಾ ಅಂತ… ಅವನಿಗೆ ಅಣ್ಣ ಬೇಕು. ನಿನಗೆ ಗಂಡ ಬೇಕು. ನಾನ್ಯಾರಿಗೆ ಬೇಕು ಹೇಳು..? ಎಲ್ಲರೂ ಮರೆತು ಕೂತ ಪಾತ್ರ ನಾನು… ಹದಿನಾಲ್ಕು ವರ್ಷ…ಅಬ್ಬಾ.. ಹದಿನಾಲ್ಕು ವರ್ಷ… ಹೇಗಿರಲಿ? ಪ್ರಾಣೇಶನ ತೊರೆದು ಹೇಗೆ ಜೀವಿಸಲಿ? ಇಲ್ಲೇ, ಇದೇ ಅಂತಃಪುರದಲ್ಲೇ ಶುದ್ಧ ತಪಸ್ವಿನಿಯಾಗಿರ್ತೀನಿ. ನನ್ನ ಗಂಡನ ತಪಸ್ಸು ಮಾಡ್ತಲೇ ಇರ್ತೀನಿ…ಮನೆಸೊಸೆ ಇದಕ್ಕಿಂತ ಹೆಚ್ಚೇನು ಮಾಡಬಲ್ಲಳು. ಓ ಪತಿದೇವ, ನಿನ್ನಮ್ಮಂದಿರ ಸೇವೆಯ ಭಾಗ್ಯ ಕೊಟ್ಟೆಯಲ್ಲಾ ಅಷ್ಟು ಸಾಕು, ಕೆಟ್ಟು ತವರು ಸೇರದಿದ್ದರೆ ಅದೇ ಸೌಭಾಗ್ಯ… ನಿನಗೆ ಜಯವಾಗಲಿ, ನಿನ್ನ ಪ್ರೀತಿಪಾತ್ರರೇ ಧನ್ಯರು. ನಿನ್ನ ಅಭಿಮಾನವಿದ್ದವರಿಗೆ ಕಷ್ಟವೆಂಬುದೇ ಇಲ್ಲ. ಆದರೆ ನಿನ್ನ ಪ್ರೇಮಿಸುವ ನನಗೇ ಅಷ್ಟಅನಿಷ್ಟಗಳು ಬಂತೇ! ಬರಲಿ… ಬರಲಿ ಬಿಡು… ಪ್ರೀತಿಸುವಾತ ನೋವನ್ನಲ್ಲದೆ ಮತ್ತೇನನ್ನು ತಾನೇ ಬಳುವಳಿಯಾಗಿ ನೀಡಬಲ್ಲ? ಆದರೆ ಅದರ ನೋವೇ ಪ್ರೀತಿಯ ಸಂಕೇತವಾಗಿರುತ್ತದೆ… ಇಗೋ, ನಿನ್ನ ಹೆಂಡತಿ, ಜನಕಜೆ, ಊರ್ಮಿಳೆ, ನಿನ್ನ ಪ್ರೇಮಯಾಗದ ಸಮಿತ್ತಿನಂತಿಲ್ಲಿ, ಈ ಮಹಾರಣ್ಯಕ್ಕಿಂತಲೂ ಘೋರಕಾನನವಾದ ಈ ಅಯೋಧ್ಯೆಯ ಅರಮನೆಯಲ್ಲಿ ನಿತ್ಯದಹಿಸಿಕೊಳ್ಳುತ್ತಲೇ ಇರುತ್ತಾಳೆ.. ನೀನು ಕ್ಷೇಮವಾಗಿ ಬಂದ ದಿನ ನಿನ್ನ ಸೇವಾನಿರತಳಾಗುತ್ತಾಳೆ…’’
-ನಾದೀ