ಮೌನ
ಮೌನ
ಮೌನ
ನೀರವ ಮೌನ. ತಂಗಾಳಿಯ ಸದ್ದೂ ಇಲ್ಲ, ಎಲೆಗಳ ಸದ್ದೂ ಇಲ್ಲ. ನಡುರಾತ್ರಿಯಾಗಿದೆಯಲ್ಲ, ಹಾಗಾಗಿ ಖಗ ಮೃಗಗಳ ಸದ್ದೂ ಇಲ್ಲ. ಏನೋ, ಅಮವಾಸ್ಯೆ ಬೇರೆ ಇದೆಯಲ್ಲ, ಚಂದ್ರ ಕಾಣುತ್ತಿಲ್ಲ ಎಂಬ ದುಃಖಕ್ಕೋ ಏನೊ ಈ ದಿನ ಕಾವೇರಿ ಕೂಡ ಮೌನವಾಗಿಯೇ ಗಾಮಿಸುತ್ತಿದ್ದಾಳೆ. ಅವಳ ದಡದಲ್ಲಿ ಕಾವಿ ಧರಿಸಿರುವ ಯೌವನ ಭರಿತ ಸುಂದರ ಯುವತಿಯೊಬ್ಬಳು ನೀರಲ್ಲಿ ಕಾಲಿಟ್ಟು ನಿಂತಿದ್ದಾಳೆ. ಹಿಂದೆ ಸ್ವಲ್ಪ ದೂರದ ಬಂಡೆಯಲ್ಲಿ, ದಾಡಿ ಬಿಟ್ಟಿರುವ ಸಂತನೊಬ್ಬ ಕೂತಿದ್ದಾನೆ.
ಗಾಳಿಗೆ ಹಾರುತ್ತಿದ್ದ ನೀಳ ಕೂದಲನ್ನು ಗಂಟುಕಟ್ಟಿಕೊಂಡು ಸಂತನ ಬಳಿ ಕೂತಳು. ಸಂತನಿಗೆ.ಅವಳು ಬಂದದ್ದು ಗೊತ್ತಾಗಿ ಕಣ್ಣರಳಿಸಿದ. ಪ್ರಸನ್ನತೆ ಇಬ್ಬರಲ್ಲೂ ಎದ್ದು ಕಾಣುತ್ತಿತ್ತು. 'ಮಗು, ನಿನ್ನ ನಿರ್ಧಾರ ಸರಿಯಾಗಿಯೇ ಇದೆ. ಆದರೂ ಮತ್ತೊಮ್ಮೆ ಯೋಚಿಸು. ಒಮ್ಮೆಗೇ ಇಂಥ ನಿರ್ಣಯ ಒಳಿತಲ್ಲ. ನಿನ್ನಂಥ ಹೂ ಸ್ವಭಾವದ ಹೆಣ್ಣು ಬದುಕುವುದು ಅಷ್ಟು ಸುಲಭವಲ್ಲ' ಎಂದು ತಲೆ ಸವರುತ್ತಾ ಹೇಳಿದನು ಸಂತ. ಈ ಹುಡುಗಿ ಮಾತ್ರ ಹಸನ್ಮುಖಿಯಾಗಿಯೇ ಇದ್ದಳು. 'ಇಷ್ಟು ದಿನ ಆಶ್ರಮದ ಸೇವೆ ಮಾಡಿ ನೋಡಿದ್ದೀಯಲ್ಲ, ಹೆಸರಿಗೆ ಮಾತ್ರ ಸರ್ವ ಸಂಗ ಪರಿತ್ಯಾಗಿಗಳು ನಾವು, ಆದರೆ ಮತ್ತೊಬ್ಬರ ನೆರವಿಲ್ಲದೆ ಒಂದು ದಿನವೂ ಇರಲಾರೆವು. ಎಲ್ಲರೂ ಕಾಣುವಂತೆ ನಮ್ಮ ಕಾಲಿಗೆ ಬಿದ್ದರೆ, ನಾವು ಇನ್ನೊಂದು ರೀತಿ ಕಾಲಿಗೆ ಬೀಳುತ್ತಿದ್ದೇವೆ. ಯಾವ ಉದ್ದೇಶಕ್ಕೆ ಈ ಕಾವಿ ಧರಿಸುತ್ತೇವೋ ಅದಕ್ಕೆ ವಿರುದ್ಧವಾದದ್ದನ್ನೇ ಮಾಡಬೇಕಾದ ಅನಿವಾರ್ಯತೆ ಇದೆ. ಹೇಳು, ಇದೆಲ್ಲ ನಿನಗೆ ಬೇಕಾ?' ಸಂತನ ಮಾತಿಗೆ ಮತ್ತದೇ ನಗು. 'ಸಂಸಾರದ ಮೇಲೆ ಜಿಗುಪ್ಸೆ ಬಂದು, ಅದು ಬೇಡ ಅಂತ ಕಿತ್ತೊಗೆದು ನಾವು ಸನ್ಯಾಸಿಗಳಾದರೆ ಜನಗಳು ದಂಡು ದಂಡಾಗಿ ಬಂದು ಸಾಂಸಾರಿಕ ಸಮಸ್ಯೆಗೆ ನಮ್ಮಿಂದ ಪರಿಹಾರ ಕೇಳುತ್ತಾರೆ. ಯಾವುದನ್ನ ಬೇಡ ಎಂದು ತಿಪ್ಪೆಗೆಸೆದು ಬಂದೆವೋ ಅದನ್ನೇ ಹೂಬುಟ್ಟಿಯಲ್ಲಿ ಹೊತ್ತು ತಂದು ಸಮರ್ಪಿಸುತ್ತಾರೆ. ಒಂಥರ ನಾವೂ dustbin ಆಗಿ ಬಿಡುತ್ತೇವೆ. ಇದೆಲ್ಲ ಬೇಕಾ ನಿನಗೆ?'. ಇಬ್ಬರೂ ನಕ್ಕರು. 'ಸರಿ ಇದೆಲ್ಲಾ ಬಿಡು. ನೀನು ಯಾಕಾಗಿ ಈ ಸನ್ಯಾಸ ಬಯಸುತ್ತಿದ್ದೀ? ದೇವರನ್ನು ನೋಡಬೇಕು ಅಂತಲೆ?'
ಸಂತನ ಪ್ರಶ್ನೆಗೆ ಇಲ್ಲ ಎಂದು ತಲೆಯಾಡಿಸಿದಳು ಯುವತಿ. 'ಮತ್ತೇನು ಜನರಿಗೆ ಸಾಂತ್ವಾನ ಹೇಳಲೇ?' ಮತ್ತೆ ತಲೆ ತಿರುವಿದಳು.
'ಇನ್ನೇನು, ದುಡ್ಡು ಮಾಡೋ ಆಸೆಗೆ ಬಂದೇನಮ್ಮ? ಎಲ್ಲಾ ಆಶ್ರಮಗಳಿಗೂ ದುಡ್ಡು ಸಿಗಲ್ಲ. ನಮ್ಮದು ಒಂದು ಜಾತಿ ಪಂಗಡ ಅಂತ ಸೀಮಿತವಾಗಿಲ್ಲದ ಮಠ, ಹಾಗಾಗಿ ಇಲ್ಲಿ ಹಣದ ಕೊರತೆಯಿದೆ. ದುಡ್ಡಿಗಾಗಿ ಸನ್ಯಾಸಿಯಾಗ್ತೀಯಾ?' ಅಂದ ಸಂತ. ಸದ್ದಿಲ್ಲದೆ ಜೋರಾಗಿ ನಕ್ಕು ಮತ್ತೆ ತಲೆ ತಿರುವಿದಳು.
'ಹಣಕ್ಕಾಗಿಯಲ್ಲ, ಆಧ್ಯಾತ್ಮಕ್ಕಾಗಿಯಲ್ಲ, ಲೋಕ ಕಲ್ಯಾಣಕ್ಕೂ ಅಲ್ಲವೇ...? ಇಷ್ಟನ್ನೂ ಮೀರಿಯೂ ಬೇರೆ ಕಾರಣವಿದೆಯೆ? ಏನಮ್ಮ ಅದು? ಯಾರಿಗಾಗಿ ಈ ತೀರ್ಮಾನ?' ಸಂತ ಉತ್ತರಕ್ಕಾಗಿ ಕಾಯುತ್ತಿದ್ದ. ಯುವತಿ ಮುಖದಲ್ಲ ಗಂಭೀರ ಮುದ್ರೆ ಧರಿಸಿ ಈ ಸಂತನ ಕಡೆ ಬೆರಳು ಮಾಡಿದಳು! ಸಂತ ಗಾಬರಿಯಾದ. 'ಏನೂ ನನಗಾಗಿಯೇ...??' ಹೌಹಾರಿದ. ಆ ಯುವತಿ ಮತ್ತೆ ನಕ್ಕಳು.
ಈ ಹುಡುಗಿ ಮೂಗಿ. ಕಣ್ಸನ್ನೆಯಲ್ಲೇ ಎಲ್ಲಾ ಮಾತಾಡುತ್ತಾಳೆ. ಕೆಂಪು ಕೆನ್ನೆಯ, ಬಿಳುಪು ಮೈಯ, ಹೊಳಪು ಕಂಗಳ ರೂಪಸಿ. ಹೌದು, ನಿಜಕ್ಕೂ ರೂಪ ಅಸಿ. ಕಳೆದ ಒಂದು ತಿಂಗಳಿಂದ ಕಾವೇರಿ ನದಿ ತಟದಲ್ಲಿದ್ದ ಈ ಆಶ್ರಮದಲ್ಲಿ ವಾಸವಿದ್ದಾಳೆ, ಎಲ್ಲಾ ಸೇವೆಗಳನ್ನು ಸ್ವತಃ ಮಾಡುತ್ತಾಳೆ. ಅವಳು ಬಂದಾಗಿನಿಂದ ಉತ್ಸಾಹಿ ಯುವಕರ ದಂಡು ಸ್ವಯಂ ಸೇವೆ ಮಾಡಲು ಮುಗಿಬಿದ್ದಿದ್ದಾರೆ. ಆದರೆ ಇವಳು ಎಲ್ಲರಂಥವಳಲ್ಲ. ತನ್ನ ದಿನಚರಿಯ ಅರ್ಧ ದಿನ ಆ ಸಂತನ ಸೇವೆಯಲ್ಲಿ ಕಳೆಯುತ್ತಾಳೆ.
ಇಂದು ಬೆಳಗ್ಗೆ ಸಂತನಿಗೆಂದು ತಂದಿದ್ದ ಕಾವಿ ಬಟ್ಟೆಯನ್ನ ಮೈಮೇಲೆ ಹೊದ್ದು ನಿಂತಳು ಈ ಹುಡುಗಿ. ಆಗ ಸಂತ ಸುಮ್ಮನೆ ಕೇಳಿದ, 'ಏನು ಮಗು, ಸಂತನ ಸಹವಾಸ ಮಾಡಿ ನಿನಗೂ ಸನ್ಯಾಸದ ಆಸೆ ಚಿಗುರಿತೆ?' ಎಂದು. ಹೌದು ಎಂಬಂತೆ ಜೋರಾಗಿ ತಲೆಯಾಡಿಸಿದಳು ಯುವತಿ. ಕಣ್ಗಳಲಿ ಭಾವೋನ್ಮತ್ತತೆ ಉಕ್ಕಿದಂತಿತ್ತು. ಸಂತ ಇದನ್ನು ಗಂಭೀರವಾಗಿ ಪರಿಗಣಿಸಿ, ಅವಳಿಗೆ ಖುಷಿಯಾಗಲೆಂದು ಕಾವಿ ವಸ್ತ್ರ ಕೊಟ್ಟು, 'ರಾತ್ರಿ ಮಾತಾಡೋಣ ಬಾ..' ಎಂದು ಹೇಳಿದ್ದ. ಈಗ ನೋಡಿದರೆ ತನಗಾಗಿ ಸನ್ಯಾಸಿಯಾಗುತ್ತೇನೆ ಅನ್ನುತ್ತಿದ್ದಾಳೆ!!!
'ನಾನಾ...?
ನಾನಾ ಕಾರಣ ನೀನು ಸನ್ಯಾಸಿನಿಯಾಗಲು. ನನ್ನಿಂದ ಅಂಥಾ ಪ್ರಭಾವ ಬೀರಲು ಸಾಧ್ಯವಿಲ್ಲ. ನಿಜ ಹೇಳು, ಯಾಕಾಗಿ ಈ ಮಾತು ಹೇಳಿದೆ? ಯಾಕಾಗಿ ಇಲ್ಲಿಗೆ ಬಂದೆ?' ಸಂತನ ಈ ಪ್ರಶ್ನೆಗೆ ಉತ್ತರಿಸುವಾಗ ನಗುವಿರಲಿಲ್ಲ ಅವಳ ಮುಖದಲ್ಲಿ.
ಏನನ್ನೋ ಹೇಳಬೇಕೆಂದು ಬಹಳ ಯತ್ನಿಸಿದಳು. 'ಅ.... ಆ...... ಆ.....' ಎಂಬ ಸ್ವರ ಹೊರಡಿತೇ ಹೊರತು ಒಂದೇ ಒಂದು ಪದ ಮೂಡಲಿಲ್ಲ. ತನ್ನ ದೌರ್ಬಲ್ಯದ ಕುರಿತಾಗಿ ಇದೇ ಮೊದಲ ಬಾರಿಗೆ ರೋದಿಸಿದಳು. ಒಮ್ಮೆ ತನ್ನನ್ನು ತೋರಿಕೊಳ್ಳುತ್ತಾ ಮತ್ತೊಮ್ಮೆ ಸಂತನನ್ನು ತೋರಿಸುತ್ತಾ ಏನೇನೋ ಕೈಯಾಡಿಸಿದಳು. ಹ್ಞೂ ಹ್ಞು ಯಾವುದೂ ಅರ್ಥವಾಗಲಿಲ್ಲ. ನೆಲದ ಮೇಲೆ ಕುಸಿದು ಮುಗಿಲಿನೆಡೆಗೆ ಮುಖ ಮಾಡಿ ಓ ಎಂದು ಆಕ್ರಂದಿಸಿದಳು. ಇದೇ ಮೊದಲ ಬಾರಿ ಅವಳನ್ನು ಇಷ್ಟು ಭಾವೋದ್ವೇಗದಲ್ಲಿ ನೋಡಿದ ಸಂತ ಕಂಗಾಲಾದ. ಅವಳ ಆ ಶೋಕ ಮೂಗತ್ವ ಇಷ್ಟು ದೊಡ್ಡ ಶಾಪವೇ? ಎಂಬಂತಿತ್ತು.
ಇದ್ದಕ್ಕಿದ್ದಂತೆ ನಕ್ಕಳು ಹುಡುಗಿ. ಕಿರು ಬೆರಳಿನಿಂದ ನೆಲದ ಮೇಲೆ ಏನೋ ಗೀಚಿದಳು. ಸಂತನ ಬಳಿಗೋಡಿ ಕೈ ಹಿಡಿದು ಎಳೆ ತಂದು ತೋರಿಸಿದಳು. ಕತ್ತಲೆ ಬೇರೆ, ಏನು ಕಾಣಲಿಲ್ಲ ಸಂತನಿಗೆ. ಕಣ್ಣನ್ನು ಸಣ್ಣ ಮಾಡಿಕೊಂಡು ಮಂಡಿಯೂರಿ ಕೂತು ನೋಡಿದ. ಸ್ಪಷ್ಟವಾಗಿ ಕಂಡಿತು 'ನಾನು ನಿನ್ನ ಮಗಳು' ಅಂತ.
ಸಂತನಿಗೆ ಸಿಡಿಲು ಬಡಿದಂತಾಯ್ತು. ಇಷ್ಟು ದಿನ ಇಲ್ಲದ್ದು ಈಗ ಅವನಿಗೆ ಅವಳಲ್ಲಿ ತನ್ನೊಂದಿ ಹೋಲಿಕೆ ಕಂಡಿತು. 1 ವರ್ಷದ ಕೂಸಿದ್ದಾಗ ಮನೆ ಬಿಟ್ಟು ಸನ್ಯಾಸ ಸ್ವೀಕರಿಸಿದ್ದ ಈ ಸಂತ ಪುಟ್ಟ ಕಂದಮ್ಮಗಳ ದನಿ ಕೇಳಿದಾಗೆಲ್ಲ 'ನನ್ನ ಮಗುವೂ ಹೀಗೆ ಮುದ್ದಾಗಿ ಮಾತಾಡುತ್ತಿರುತ್ತಾ...'ಅಂತ ಯೋಚಿಸುತ್ತಿದ್ದ. ಈಗ 20 ವರ್ಷಗಳ ಬಳಿಕ ಗೊತ್ತಾಗಿದೆ ಆ ಮಗುವಿಗೆ ಮಾತೆ ಬರುತ್ತಿಲ್ಲ ಎಂದು. ತಿಂಗಳ ಹಿಂದೆ ಹೆಂಡತಿ ಸತ್ತ ಸುದ್ದಿ ಕೇಳಿ ಸಮಚಿತ್ತನಾಗಿದ್ದ ಸಂತ ಈಗ ಮಗಳನ್ನ ನೋಡಿ ತಡಬಡಿಸುತ್ತಿದ್ದಾನೆ.
'ನನಗಿೊಸ್ಕರ ಅಂದರೆ, ನನ್ನ ಜೊತೆಗಿರಲೆಂದಾ ನೀನು ಸನ್ಯಾಸ ಬೇಕು ಅಂತಿರೋದು?' ಕೇಳಿದ ಸಂತ. ಹ್ಞೂಗುಟ್ಟಿದಳು ಹುಡುಗಿ. ಹೌದು. ಈಗ ಮಗಳಿಗೆ ಬೇರೆ ಗತಿಯಿಲ್ಲ. ಅವಳ ಹೊಣೆ ನನ್ನದೆ. ಈಗಿರುವುದು ಎರಡೇ ಆಯ್ಕೆ. ಒಂದೋ ಅವಳಿಗೆ ಸನ್ಯಾಸ ನೀಡುವುದು, ಇಲ್ಲ ತಾನೇ ಸನ್ಯಾಸ ಬಿಡುವುದು. ಯಾವುದು ಸೂಕ್ತ ಈಗ?
ಸಂತನೇ ಎಷ್ಟೋ ಸಲ ಹೇಳಿದ್ದ ಹೆಣ್ಣು ಮಕ್ಕಳಿಗೆ ತಂದೆ ಮೇಲೆಯೆ ಒಲವು ಜಾಸ್ತಿ ಅಂತ. ಅದು ಅವನಿಗೆ ಈಗ ಅನುಭವಕ್ಕೆ ಬಂದಿದೆ. ಕಣ್ಣಿಂದ ಆನಂದ ಸುಧೆ ಹರಿದು ಹೋಗುತ್ತಿದೆ. ಬಿಕ್ಕಿಸಿ ಅಳುತ್ತಿದ್ದ ಮಗಳನ್ನು ಎದೆಗಾನಿಸಿಕೊಂಡ. 'ಮಗು, ನನಗಾಗಿ ನೀನು ನಿನ್ನ ಭವಿಷ್ಯವನ್ನೆಲ್ಲಾ ತ್ಯಾಗ ಮಾಡಲು ಮುಂದಾದೆಯಲ್ಲ, ನಿಜಕ್ಕೂ ನೀನೆ ಮುಕ್ತಳು. ಮೋಕ್ಷವೆಂಬ ಸ್ವಾರ್ಥಕ್ಕೆ ನಿಮ್ಮನ್ನೆಲ್ಲಾ ತೊರೆದು ಬಂದ ಪಾಪಿ ನಾನು. ನನ್ನ ತಪ್ಪನ್ನ ಕ್ಷಮಿಸಿಬಿಡಮ್ಮ. ನಿನಗೆ ಸನ್ಯಾಸತ್ವ ಬೇಡ, ನಾನೇ ಸನ್ಯಾಸತ್ವಕ್ಕೇ ಸನ್ಯಾಸ ನೀಡಿ ಇದ್ದುಬಿಡುತ್ತೇನೆ ನಿನ್ನೊಂದಿಗೆ. ನಾನು ನಿನಗೆ ತಂದೆಯಲ್ಲ. ನೀನೆ ನನಗೆ ತಾಯಿ' ಎಂದು ಕೈ ಮುಗಿದ. ಆ ಯುವತಿ ಕೈಗಳಿಗೆ ಮುತ್ತಿಟ್ಟು ಮಡಿಲ ಮೇಲೆ ಮಲಗಿದಳು.
ಈಗಲೂ ಹೊರಗೆಲ್ಲ ಮೌನವೇ ಇತ್ತು. ಆದರೆ ಆ ಮಾಜಿ ಸಂತನ ಮನದಲ್ಲಿ ಹಳೇ ಹಾಡೊಂದು ಕೇಳುತ್ತಿತ್ತು.....
ಒಲವೇ ಜೀವನ ಸಾಕ್ಷಾತ್ಕಾರ.....
ಸಾಕ್ಷಾತ್ಕಾರ
ಸಾಕ್ಷಾತ್ಕಾರ
ನಾದೀ